ಉಡುಪಿ: ನವದೆಹಲಿಯ ಭಾರತ ಮಂಟಪಂನಲ್ಲಿ ಜನವರಿ 9ರಿಂದ 12ರವರೆಗೆ ನಡೆಯುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್–2026ಕ್ಕೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ವಿದ್ಯಾರ್ಥಿನಿ ಮನು ಶೆಟ್ಟಿ ಸತತ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಅವರು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ.

ವಿಕಸಿತ ಭಾರತ–2047 ಗುರಿ ಸಾಧನೆಗೆ ಯುವಕರ ಪಾತ್ರವನ್ನು ಬಲಪಡಿಸುವ ಉದ್ದೇಶದ ಈ ಸಂವಾದದಲ್ಲಿ ಮಹಿಳಾ ನೇತೃತ್ವ, ಪಾರದರ್ಶಕ ಆಡಳಿತ, ಸಾಂಸ್ಕೃತಿಕ ಪ್ರಭಾವ ಮತ್ತು ಅವಿಷ್ಕಾರ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ. ಗುಂಪು ಚರ್ಚೆಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಹರ್ಮನ್ ಪ್ರೀತ್ ಕೌರ್, ಬ್ಯಾಡ್ಮಿಂಟನ್ ಕೋಚ್ ಪುಲ್ಲೆಲಾ ಗೋಪಿಚಂದ್ , ಸಂವಹನ ತಜ್ಞೆ ಪಲ್ಕಿ ಶರ್ಮಾ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಯುವಕರೊಂದಿಗೆ ತಮ್ಮ ಅನುಭವ ಹಾಗೂ ಮಾರ್ಗದರ್ಶನ ಹಂಚಿಕೊಳ್ಳಲಿದ್ದು, ಈ ಸಂವಾದವು ಯುವ ಪೀಳಿಗೆಗೆ ರಾಷ್ಟ್ರ ನಿರ್ಮಾಣದ ಗುರಿಗಳತ್ತ ಮುನ್ನಡೆಯಲು ಪ್ರೇರಣೆ ನೀಡಲಿದೆ.



