ಉಡುಪಿ: ಆನ್‌ಲೈನ್ ಹೂಡಿಕೆ ಮೂಲಕ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿವೃತ್ತ ನೌಕರ ಉಮಾನಂದ ಕೆ.ವಿ. (61) ಅವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದ ವೇಳೆ, ಅ.22ರಂದು ಅಪರಿಚಿತ ವ್ಯಕ್ತಿಯಿಂದ ಸಂದೇಶ ಬಂದಿತ್ತು. ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿದ ಆರೋಪಿಯ ಮಾತು ನಂಬಿದ ಉಮಾನಂದ, ನ.6ರಿಂದ ಡಿ.31ರವರೆಗೆ ವಿವಿಧ ಹೆಸರಿನ ಸ್ಟಾಕ್ ಮಾರ್ಕೆಟ್ ಕಂಪೆನಿಗಳೆಂದು ತಿಳಿಸಿದ ಖಾತೆಗಳಿಗೆ ಒಟ್ಟು 30,32,000 ರೂಪಾಯಿ ಹಣ ಜಮಾ ಮಾಡಿದ್ದಾರೆ.

ಆದರೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಲೀ ವಾಪಾಸು ನೀಡದೆ ಆರೋಪಿಗಳು ಮೋಸ ಮಾಡಿರುವುದಾಗಿ ದೂರಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



