ಉಡುಪಿ: ಜನವರಿ 3ರಂದು ಭೂಮಿಗೆ ಸೂರ್ಯ ಹಾಗೂ ಚಂದ್ರರು ಒಂದೇ ದಿನ ಅಪರೂಪದ ರೀತಿಯಲ್ಲಿ ಅತ್ಯಂತ ಸಮೀಪ ಬರುವ ಖಗೋಳ ವಿದ್ಯಮಾನ ನಡೆಯಲಿದೆ. ಖಗೋಳಶಾಸ್ತ್ರದಲ್ಲಿ ಇದು ಅತ್ಯಂತ ವಿರಳ ಹಾಗೂ ವಿಶೇಷ ದಿನವಾಗಿದೆ ಎಂದು ಖಗೋಳ ತಜ್ಞ ಡಾ. ಎ.ಪಿ. ಭಟ್ ತಿಳಿಸಿದ್ದಾರೆ.

ಈ ದಿನ ಭೂಮಿ ಸೂರ್ಯನಿಗೆ ಸುಮಾರು 14 ಕೋಟಿ 70 ಲಕ್ಷ ಕಿಲೋಮೀಟರ್ ದೂರಕ್ಕೆ ಸಮೀಪ ಬರುವ ಪೆರಿಹಿಲಿಯನ್ ಸ್ಥಿತಿ ಉಂಟಾಗುತ್ತದೆ. ಇದರಿಂದ ಸೂರ್ಯ ಸಾಮಾನ್ಯ ದಿನಗಳಿಗಿಂತ ಸ್ವಲ್ಪ ದೊಡ್ಡದಾಗಿ ಕಾಣಿಸಿಕೊಳ್ಳಲಿದೆ. ಸರಾಸರಿ 15 ಕೋಟಿ ಕಿಲೋಮೀಟರ್ ದೂರಕ್ಕಿಂತ ಭೂಮಿ ಸೂರ್ಯನಿಗೆ ಹೆಚ್ಚು ಸಮೀಪ ಬರುತ್ತದೆ.

ಅದೇ ದಿನ ಹುಣ್ಣಿಮೆ ಹಾಗೂ ಈ ವರ್ಷದ ಪ್ರಥಮ ಸೂಪರ್ ಮೂನ್ ಕೂಡ ಸಂಭವಿಸಲಿದೆ. ಸೂಪರ್ ಮೂನ್ ಪರಿಣಾಮವಾಗಿ ಚಂದ್ರನು ಭೂಮಿಗೆ ಸುಮಾರು 27 ಸಾವಿರ ಕಿಲೋಮೀಟರ್ ಸಮೀಪ ಬಂದು, ಸಾಮಾನ್ಯ ಹುಣ್ಣಿಮೆಯಿಗಿಂತ 14 ಶೇಕಡಾ ದೊಡ್ಡದಾಗಿ ಹಾಗೂ 30 ಶೇಕಡಾ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದೆ.

ಭೂಮಿ ಸೂರ್ಯನ ಸುತ್ತ ಹಾಗೂ ಚಂದ್ರ ಭೂಮಿಯ ಸುತ್ತ ದೀರ್ಘವೃತ್ತಾಕಾರದ ಪಥದಲ್ಲಿ ಸಂಚರಿಸುವುದರಿಂದ ಈ ಅಪರೂಪದ ಖಗೋಳ ಘಟನೆಗಳು ಸಂಭವಿಸುತ್ತವೆ. ಇದೇ ವರ್ಷ ಭೂಮಿ ಜುಲೈ 6ರಂದು ಸೂರ್ಯನಿಂದ ಅತಿದೂರವಾದ ಅಪೊಹಿಲಿಯನ್ ಸ್ಥಿತಿಗೆ ತಲುಪಲಿದೆ. ಒಂದೇ ದಿನ ಸೂರ್ಯ–ಪೆರಿಹಿಲಿಯನ್ ಮತ್ತು ಚಂದ್ರ–ಸೂಪರ್ ಮೂನ್ ಸಂಭವಿಸುವುದು ಈ ವರ್ಷದ ಅತ್ಯಂತ ವಿಶಿಷ್ಟ ಖಗೋಳ ಘಟನೆಯಾಗಲಿದೆ ಎಂದು ಡಾ. ಎ.ಪಿ. ಭಟ್ ತಿಳಿಸಿದ್ದಾರೆ.



