ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅನ್ನು ಹೋಲುವ ನಕಲಿ ವೆಬ್‌ಸೈಟ್ ಸೃಜಿಸಿ, ಭಕ್ತರಿಂದ ಮುಂಗಡ ರೂಮ್ ಬುಕಿಂಗ್ ಹೆಸರಿನಲ್ಲಿ ಹಣ ಪಡೆದು ನಕಲಿ ರಶೀದಿ ನೀಡಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಆಲ್ವಾರ್ ಜಿಲ್ಲೆಯ ತಿಜಾರಾ ನಿವಾಸಿ ನಾಸೀರ್ ಹುಸೇನ್ (21) ಬಂಧಿತ ಆರೋಪಿ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿತ್ತು. ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ ಬಿ. ಮತ್ತು ಸಿಪಿಐ ಸಂತೋಷ ಎ. ಕಾಯ್ಕಿಣಿ ನೇತೃತ್ವದ ತಂಡವು ತನಿಖೆ ನಡೆಸಿ, ಆರೋಪಿಯು ರಾಜಸ್ಥಾನದಿಂದ ಕೃತ್ಯ ನಡೆಸಿರುವುದನ್ನು ಪತ್ತೆಹಚ್ಚಿ ಡಿಸೆಂಬರ್ 19ರಂದು ಬಂಧಿಸಿದೆ.

ಆರೋಪಿಯಿಂದ ವಂಚನೆಗೆ ಬಳಸಿದ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಡಿಸೆಂಬರ್ 20ರಂದು ಆರೋಪಿಯನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



