ಉಡುಪಿ : ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಣಿಪಾಲದಲ್ಲಿ ಸ್ಪಾರ್ಕ್ ಯೋಜನೆಯಡಿ ಅಂತರರಾಷ್ಟ್ರೀಯ ನಿರಂತರ ವೈದ್ಯಕೀಯ ಶಿಕ್ಷಣ, ಹ್ಯಾಂಡ್ಸ್–ಆನ್ ಕಾರ್ಯಾಗಾರ ಹಾಗೂ ಸಂಶೋಧನಾ ಪ್ರಬಂಧ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಆಕ್ಯುಲರ್ ಮೈಕ್ರೋಬಯೋಮ್ ಸಂಶೋಧನೆಯ ಅನ್ವಯಿಕೆ ವಿಷಯದಡಿ ನಡೆದ ಈ ಸಿಎಮ್‌ಇಗೆ ನೇತ್ರವಿಜ್ಞಾನ, ಸೂಕ್ಷ್ಮಜೀವವಿಜ್ಞಾನ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಹಾಗೂ ಆಕ್ಯುಲರ್ ನ್ಯಾನೊಮೆಡಿಸಿನ್ ಕೇಂದ್ರ ಸಹಯೋಗ ನೀಡಿತು. ವೈದ್ಯರು, ಸಂಶೋಧಕರು ಸೇರಿ 125ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಮಾಹೆಯ ಸಂಶೋಧನಾ ನಿರ್ದೇಶಕ ಡಾ. ಎಂ. ಶಾಮ ಪ್ರಸಾದ್ ಅಂತರರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು. ಡಾ. ಶ್ರಾಫ್ಸ್ ಚಾರಿಟಿ ಕಣ್ಣಿನ ಆಸ್ಪತ್ರೆಯ ಡಾ. ಮನೀಷಾ ಆಚಾರ್ಯ ಸಂಶೋಧನಾ ಪ್ರಬಂಧವನ್ನು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಯಾಗಿ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಪ್ರೊ. ಡಾ. ಮಾರ್ಕ್ ವಿಲ್ಕಾಕ್ಸ್ ಭಾಗವಹಿಸಿ, ಸ್ಪಾರ್ಕ್ ಅನುದಾನದಡಿ ನಡೆಯುತ್ತಿರುವ ಸಂಯುಕ್ತ ಸಂಶೋಧನೆಯ ಕುರಿತು ಮಾತನಾಡಿದರು. ಅವರು 15 ದಿನಗಳ ಕಾಲ ಕೆಎಂಸಿ ಮಣಿಪಾಲದಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಮಾಸ್ ಸ್ಪೆಕ್ಟ್ರೋಸ್ಕೋಪಿ, ಕಾನ್ಫೋಕಲ್ ಇಮೇಜಿಂಗ್, ಟಿಶ್ಯೂ ಎಂಜಿನಿಯರಿಂಗ್ ಹಾಗೂ 3ಡಿ ಮುದ್ರಣ ಕುರಿತ ಪ್ರಾಯೋಗಿಕ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮಕ್ಕೆ ಕೆಎಂಸಿ ನೇತ್ರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ಧನ್ಯವಾದ ಅರ್ಪಿಸಿದರು.



