ಉಡುಪಿ : ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಯ ಮಣಿಪಾಲ್ ಹಾಸ್ಪಿಸ್ ಮತ್ತು ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ)ನಲ್ಲಿ ನೂತನವಾಗಿ ನಿರ್ಮಿಸಲಾದ ಹರೀಶ್ ಮತ್ತು ಬೀನಾ ಶಾ ಫೌಂಡೇಶನ್ ಕ್ಲಿನಿಕಲ್ ಬ್ಲಾಕ್ ಲೋಕಾರ್ಪಣೆಗೊಳಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆಯ ಹಳೆಯ ವಿದ್ಯಾರ್ಥಿ ಹಾಗೂ ಹರೀಶ್ ಮತ್ತು ಬೀನಾ ಶಾ ಫೌಂಡೇಶನ್ ಅಧ್ಯಕ್ಷ ಹರೀಶ್ ಶಾ ಭಾಗವಹಿಸಿ, ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ಮಾನವೀಯ ಸೇವೆಗೆ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಈ ಹೊಸ ಕ್ಲಿನಿಕಲ್ ಬ್ಲಾಕ್ ರೋಗಿಗಳಿಗೆ ಘನತೆ, ನೆಮ್ಮದಿ ಮತ್ತು ಗೌರವಯುತ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆ ಕುಲಪತಿ ಎಂ. ಡಿ. ವೆಂಕಟೇಶ್, ಹಳೆಯ ವಿದ್ಯಾರ್ಥಿಯ ಸಮಾಜಮುಖಿ ಕೊಡುಗೆ ವಿಶ್ವವಿದ್ಯಾಲಯಕ್ಕೆ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದರು. ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು, ಡಾ. ಟಿ.ಎಂ.ಎ. ಪೈ ಅವರ ಆಶಯದಂತೆ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡುತ್ತಿರುವುದು ಸಂತಸದ ವಿಷಯ ಎಂದರು.

ಹೆಲ್ತ್ ಸೈನ್ಸ್ ವಿಭಾಗದ ಸಹ ಕುಲಪತಿ ಡಾ. ಶರತ್ ಕೆ. ರಾವ್, ಈ ಸೌಲಭ್ಯವು ಪ್ಯಾಲಿಯೇಟಿವ್ ಕೇರ್ ಕ್ಷೇತ್ರದಲ್ಲಿ ಅಧ್ಯಯನ, ಚಿಕಿತ್ಸೆ ಮತ್ತು ಸಂಶೋಧನೆಗೆ ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಂಎಚ್‌ಆರ್‌ಸಿ ನಿರ್ದೇಶಕಿ ಡಾ. ಸೀಮಾ ರಾಜೇಶ್ ರಾವ್ ವಂದಿಸಿದರು. ಮಾಹೆ ಹಾಗೂ ಎಂಎಚ್‌ಆರ್‌ಸಿಯ ಹಿರಿಯ ಅಧಿಕಾರಿಗಳು, ವೈದ್ಯರು ಮತ್ತು ಅತಿಥಿಗಳು ಉಪಸ್ಥಿತರಿದ್ದರು.



