ಉಡುಪಿ : ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಗುವ ದೈವಕೋಲ ಹಾಗೂ ನೇಮೋತ್ಸವಗಳ ಕಾಲ ಈಗ ನಡೆಯುತ್ತಿದ್ದು, ಮಣಿಪಾಲ ವ್ಯಾಪ್ತಿಯ ಪರ್ಕಳದಲ್ಲಿ ನಡೆದ ಸಿರಿ ಸಿಂಗಾರ ನೇಮೋತ್ಸವದ ಬಳಿಕ ನೇಮಕ್ಕೆ ಬಳಸಿದ್ದ ಅಣಿಯನ್ನು ರಾಷ್ಟ್ರೀಯ ಹೆದ್ದಾರಿಯ ವಿದ್ಯುತ್ ದೀಪದ ಕಂಬಕ್ಕೆ ಕಟ್ಟಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ನೇಮೋತ್ಸವ ಮುಗಿದ ಬಳಿಕ ಸಿರಿ ಸಿಂಗಾರದ ಅಣಿಯನ್ನು ತಮ್ಮ ಸ್ವಂತ ಜಾಗದಲ್ಲಿರುವ ತೆಂಗಿನ ಮರ ಅಥವಾ ಇತರ ಮರಗಳಿಗೆ ಕಟ್ಟುವ ಸಂಪ್ರದಾಯ ಇದೆ. ಆದರೆ ಇಲ್ಲಿ ಅಜಾಗರೂಕತೆಯಿಂದ ಅಥವಾ ಕಿಡಿಕೇಡಿಗಳ ಕೃತ್ಯದಿಂದ ಅಣಿಯನ್ನು ವಾಹನ ಸಂಚಾರ ನಿರಂತರವಾಗಿರುವ ರಾಷ್ಟ್ರೀಯ ಹೆದ್ದಾರಿಯ ವಿದ್ಯುತ್ ಕಂಬಕ್ಕೆ ಕಟ್ಟಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಮಾರ್ಗದಲ್ಲಿ ನಿರಂತರವಾಗಿ ದ್ವಿಚಕ್ರ ಮತ್ತು ಇತರೆ ವಾಹನ ಸಂಚಾರ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ಅಣಿ ಕಟ್ಟಿರುವುದು ಚಾಲಕರಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ರಾತ್ರಿ ವೇಳೆ ಹಾಗೂ ವೇಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಇದು ಅಪಾಯಕಾರಿಯಾಗುವ ಸಂಭವವಿದೆ.

ಇದು ದೈವದ ಆರಾಧನೆಯ ಭಾಗವೇ ಅಥವಾ ಕಿಡಿಕೇಡಿಗಳ ಅಜಾಗರೂಕ ಕೃತ್ಯವೇ ಎಂಬ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಯಾವುದೇ ಕಾರಣವಾಗಿದ್ದರೂ ಸಾರ್ವಜನಿಕ ರಸ್ತೆ ಸುರಕ್ಷತೆಗೆ ಇದು ಅಪಾಯಕಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಅಣಿಯನ್ನು ತೆರವುಗೊಳಿಸಿ ಸಂಭವನೀಯ ಅಪಘಾತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



