Monday, March 2, 2026

spot_img

ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿ: ಉಡುಪಿಯಲ್ಲಿ ಸಾಂಪ್ರದಾಯಿಕ ಧಾನ್ಯ ಮುಹೂರ್ತ ಸಂಭ್ರಮ

ಉಡುಪಿ: ಶಿರೂರು ಮಠದ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಧಾನ್ಯ ಮುಹೂರ್ತ ಸೋಮವಾರ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಉಡುಪಿಯ ಶ್ರೀ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯಲಾಗುತ್ತಿದ್ದು, ಇಲ್ಲಿ ಪ್ರತಿದಿನ ಶೋಢಶೋಪಚಾರ ಪೂಜೆಯೊಂದಿಗೆ ಹತ್ತಾರು ಬಗೆಯ ಖಾದ್ಯಗಳ ನೈವೇದ್ಯ ಸಮರ್ಪಿಸಲಾಗುತ್ತದೆ. ದೇವರ ನೈವೇದ್ಯವೇ ಅನ್ನಪ್ರಸಾದ ರೂಪದಲ್ಲಿ ಲಕ್ಷಾಂತರ ಭಕ್ತರಿಗೆ ವಿತರಿಸಲಾಗುವುದರಿಂದ ಉಡುಪಿ ಕೃಷ್ಣನ ಆರಾಧನೆಯನ್ನು ಅನ್ನಬ್ರಹ್ಮನ ಪೂಜೆ ಎಂದೇ ಕರೆಯಲಾಗುತ್ತದೆ.

 ಜನವರಿ 18ರಂದು ನಡೆಯಲಿರುವ ಶಿರೂರು ಮಠದ ಪರ್ಯಾಯಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಕಾಲ ಭಕ್ತರ ಉಟೋಪಚಾರಕ್ಕೆ ಅಗತ್ಯವಿರುವ ಧಾನ್ಯ ಸಂಗ್ರಹಣೆಯ ಸಂಕೇತವಾಗಿ ಈ ಧಾನ್ಯ ಮುಹೂರ್ತ ಜರುಗಿತು. ಈ ಮೊದಲು ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ಹಾಗೂ ಕಟ್ಟಿಗೆ ಮುಹೂರ್ತಗಳು ನಡೆದಿದ್ದು, ಎಲ್ಲಾ ಮುಹೂರ್ತಗಳ ಉದ್ದೇಶ ಮುಂದಿನ ಎರಡು ವರ್ಷಗಳ ಕಾಲ ಅನ್ನದಾಸೋಹಕ್ಕೆ ಸಿದ್ಧತೆ ನಡೆಸುವುದಾಗಿದೆ.

ಧಾನ್ಯ ಮುಹೂರ್ತದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಶ್ರೀ ಕೃಷ್ಣದೇವರು ಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇವರ ದರ್ಶನ ಪಡೆದ ಬಳಿಕ, ನೂರಾರು ಭಕ್ತರು ತಲೆಯ ಮೇಲೆ ಅಕ್ಕಿಯ ಮುಡಿಯನ್ನು ಹೊತ್ತು ಸಂಪ್ರದಾಯಬದ್ಧ ಮೆರವಣಿಗೆಯಲ್ಲಿ ಭಾಗವಹಿಸಿದರು. ಧಾನ್ಯ ಸಂಗ್ರಹಣೆಯ ಪ್ರತಿರೂಪವಾಗಿ ನಡೆದ ಈ ಮೆರವಣಿಗೆ ಅಷ್ಟಮಠಗಳ ರಥಬೀದಿಯಲ್ಲಿ ವಾದ್ಯಮೇಳಗಳೊಂದಿಗೆ ಸಾಗಿತು.

ಬಳಿಕ ಮೆರವಣಿಗೆ ಶ್ರೀ ಕೃಷ್ಣ ಮಠ ಪ್ರವೇಶಿಸಿ, ಕೃಷ್ಣ ಮಠದ ಆಡಳಿತ ಕಚೇರಿ ಇರುವ ಬಡಗು ಮಾಳಿಗೆಯಲ್ಲಿ ಅಕ್ಕಿಯ ಮುಡಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಉಡುಪಿಯ ಸಂಪ್ರದಾಯದಂತೆ ಕಟ್ಟಿಗೆಗಳನ್ನು ಜೋಡಿಸಿ ನಿರ್ಮಿಸಲಾದ ರಥಕ್ಕೆ ಈ ಸಂದರ್ಭದಲ್ಲಿ ಶಿಖರ ಪ್ರತಿಷ್ಠೆಯೂ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಮಠದ ದಿವಾನ ಡಾ. ಉದಯ ಸರಳತ್ತಾಯ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಎಂ.ಬಿ. ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಇಂದ್ರಾಳಿ ಜಯಕರ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪರ್ಯಾಯ ಸಮಿತಿ ಸದಸ್ಯರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ನಂದನ್ ಜೈನ್, ಮಧುಕರ್ ಮುದ್ರಾಡಿ, ವಿಷ್ಣು ಪ್ರಸಾದ್ ಪಾಡೀಗಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles