ಉಡುಪಿ: ಸನಾತನ ಧರ್ಮವನ್ನು ನಾಶಮಾಡುವುದೆಂದು ಲಾರ್ಡ್ ಮೆಕಾಲೇ ಭಾವಿಸಿದ್ದರೂ, ನಮ್ಮ ವೇದ–ಗೀತೆಯ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ಬಾಲ್ಯದಲ್ಲೇ ರಾಮನಾಮ ಜಪಿಸುತ್ತ ಬೆಳೆದ ನಾನು, ಆ ಮಂತ್ರವೇ ನನ್ನ ಬದುಕನ್ನು ಎತ್ತಿಕೊಂಡಿದೆ. ಉಡುಪಿಯಲ್ಲಿ ನಾನು ವೈಕುಂಠವನ್ನು ಕಂಡಿದ್ದೇನೆ ಎಂದು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಹೇಳಿದರು.

ಅವರು ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಮಠದ ವತಿಯಿಂದ ಮಾಸಪೂರ್ತಿ ನಡೆದ ಬೃಹತ್ ಗೀತೋತ್ಸವ ಸಮಾರೋಪದಲ್ಲಿ ಮಾತನಾಡಿದರು, ಭಗವದ್ಗೀತೆ ಎಲ್ಲರಿಗೂ ಮಾರ್ಗದರ್ಶಕ ಗ್ರಂಥ. ಮಧ್ವಾಚಾರ್ಯರ ದ್ವೈತ ಸಿದ್ಧಾಂತ ವಿಶ್ವಕ್ಕೇ ಪ್ರೇರಣೆ. ಗೀತೆಯನ್ನು ಬರೆಯುತ್ತಿರುವ ಒಂದು ಕೋಟಿ ಜನರಿಗೆ ನನ್ನ ನಮನಗಳು. ನಾನೂ ಗೀತೆ ಬರೆಯುವ ದೀಕ್ಷೆ ತೆಗೆದುಕೊಂಡಿದ್ದೇನೆ. ಕನಕದಾಸರ ಕನಕನ ಕಿಂಡಿ ಅದು ಜಾತಿ ಧನವನ್ನಲ್ಲ, ಭಕ್ತಿಯನ್ನು ಪ್ರತಿಪಾದಿಸುವ ಬಾಗಿಲು. ಗೀತೆ ಮಾನವೀಯತೆಯ ಅತ್ಯುನ್ನತ ಪ್ರಣಾಳಿಕೆ. ಯುವಕರು ಭಗವದ್ಗೀತೆಯನ್ನು ಕೈಯಲ್ಲಿ ಹಿಡಿಯಬೇಕು. ಸಂಕಷ್ಟದಲ್ಲಿ ಗೀತೆ ಸಾಂತ್ವನ ನೀಡುತ್ತದೆ. ಗೋ ಸಂರಕ್ಷಣೆ ಧರ್ಮದ ಭಾಗ. ನಾನು 60 ಗೋವುಗಳ ಗೋಶಾಲೆ ನಡೆಸುತ್ತೇನೆ. ಪ್ರತಿ ಕುಟುಂಬ ಒಂದು ಗೋವನ್ನು ಸಾಕಬೇಕು. ಇತರ ಧರ್ಮಗಳನ್ನು ದೂರುವುದಿಲ್ಲ, ನಮ್ಮದೇ ಜವಾಬ್ದಾರಿಯನ್ನು ನಾವೇ ಮೇಲಕ್ಕೆತ್ತಬೇಕು ಎಂದು ಕರೆ ನೀಡಿದರು.

ವಿಜಯನಗರ ಸಾಮ್ರಾಜ್ಯದ ಆದರ್ಶ ಆಡಳಿತವನ್ನು ಉದಾಹರಣೆಯಾಗಿಸಿಕೊಂಡು, ಧರ್ಮರಕ್ಷಣೆ–ಸನಾತನ ಮೌಲ್ಯಗಳ ಪರ ಹೋರಾಟ ನಡೆಸುತ್ತಿರುವ ಪವನ್ ಕಲ್ಯಾಣ್ ಅವರಿಗೆ ಅಭಿನವ ಶ್ರೀಕೃಷ್ಣದೇವರಾಯ ಪ್ರಶಸ್ತಿ ಪುತ್ತಿಗೆ ಮಠದಿಂದ ಪ್ರದಾನ ಮಾಡಲಾಯಿತು.

ಕನ್ನಡ, ತೆಲುಗು ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಜನನಿ ಸಂಸ್ಕೃತವಾಗಿದ್ದು, ಆಂಗ್ಲ ಭಾಷೆಯಲ್ಲಿಯೂ ಸಂಸ್ಕೃತದ ಪ್ರಭಾವವಿದೆ. ಸಂಸ್ಕೃತವು ಸರ್ವಸಮ್ಮತ, ವಿಶ್ವವಾದಿ, ಪವಿತ್ರ ಭಾಷೆಯಾಗಿದೆಯೆಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದು, ಇಸ್ಕಾನ್ನ ಸುಭಾಗ್ ಸ್ವಾಮಿ ಗುರು ಮಹಾರಾಜರು, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.ಹೈದರಾಬಾದ್ನ ಉದ್ಯಮಿಗಳಾದ ಬಿ.ಪಿ. ರಾಘವೇಂದ್ರರಾವ್, ಮುರಳೀಧರ್ ಬಲ್ಲಾಳ ಹಾಗೂ ಮಂಗಳೂರಿನ ಸುಯೋಗ್ ಶೆಟ್ಟಿ ಅವರಿಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟಿಟಿಡಿ ಸದಸ್ಯರು ಬಿ. ಆನಂದ ಸಾಯಿ, ಸುರೇಶ್ ಕುಮಾರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ವಂಶಿಕೃಷ್ಣ ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಭಗವದ್ಗೀತೆಯ 15ನೇ ಅಧ್ಯಾಯ ಪುರುಷೋತ್ತಮ ಯೋಗ, 18ನೇ ಅಧ್ಯಾಯ ಮೋಕ್ಷ ಸನ್ಯಾಸ ಯೋಗದ ಶ್ಲೋಕಗಳನ್ನು ಸಾಮೂಹಿಕವಾಗಿ ಪಾರಾಯಣ ಮಾಡುವ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸಲಾಯಿತು. ವಿದ್ವಾನ್ ರಾಘವೇಂದ್ರ ಆಚಾರ್ಯ ವೇದಘೋಷ ಪಠಿಸಿದರು. ಡಾ. ವಿಜಯೇಂದ್ರ ಸ್ವಾಗತಿಸಿದರು. ಡಾ. ಬಿ. ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.



