ಉಡುಪಿ: ಸಾಂಪ್ರದಾಯಿಕ ಕುಲಕಸುಬುಗಳಿಗೆ ಪುನರ್ ಚೈತನ್ಯ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದ ವಿಶ್ವಕರ್ಮ ಯೋಜನೆ ದೇಶದ ಕೋಟ್ಯಂತರ ಕುಶಲಕರ್ಮಿಗಳಿಗೆ ಆರ್ಥಿಕ ಬಲವರ್ಧನೆ ಮಾಡುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬ್ರಹ್ಮಾವರದಲ್ಲಿ ತಿಳಿಸಿದರು.

ಅವರು ಬ್ರಹ್ಮಾವರದ ಅಂಚೆ ಕಚೇರಿಯಲ್ಲಿ ಸುಮಾರು 15 ಮಂದಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಣೆ ಮಾಡಿ ಮಾತನಾಡುತ್ತಿದ್ದರು. ಬಹುತೇಕ ಹಿಂದುಳಿದ ವರ್ಗ ಮತ್ತು ಸಾಂಪ್ರದಾಯಿಕ ಕುಲಕಸುಬು ಎಂದು ಪರಿಗಣಿಸಿರುವ 18 ವೃತ್ತಿಗಳಿಗೆ ಪುನರ್ ಚೈತನ್ಯ ನೀಡಲು 12,000 ಕೋಟಿ ರೂಪಾಯಿಗಳ ಬ್ಯಾಂಕ್ ಭದ್ರತೆ ನೀಡಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಕುಶಲಕರ್ಮಿಗಳಿಗಾಗಿ 4,70,000 ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದು 1,21,500 ಜನ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಪಡೆದಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ 9,61,21,000 ರೂಪಾಯಿ ಕಡಿಮೆ ಬಡ್ಡಿಯ ಸಾಲ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ 6514 ಜನರಿಗೆ ತರಬೇತಿ ನೀಡಿ 3934 ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗಿದೆ. ಸುಮಾರು 38,79,58,000 ರೂಪಾಯಿ ಉಡುಪಿ ಜಿಲ್ಲೆಯಲ್ಲಿ ಸಾಲ ಸೌಲಭ್ಯ ವಿತರಿಸಲಾಗಿದೆ. 2086 ಜನರಿಗೆ ಟೂಲ್ ಕಿಟ್‌ಗಳನ್ನು ವಿತರಿಸಿ ಕುಶಲಕರ್ಮಿಗಳ ಬದುಕಿಗೆ ನವಚೈತನ್ಯ ನೀಡಲು ನರೇಂದ್ರ ಮೋದಿಯವರ ಈ ಯೋಜನೆ ಅನುಷ್ಠಾನವಾಗುತ್ತಿದೆ ಎಂದರು.

ಸ್ಥಳೀಯ ಶಾಸಕ ಯಶ್‌ಪಾಲ್ ಸುವರ್ಣ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಅಸಿಸ್ಟೆಂಟ್ ಪೋಸ್ಟ್ಲ್ ಸೂಪರಿಡೆಂಟ್ ವಸಂತ್, ಪೋಸ್ಟ್ ಮಾಸ್ಟರ್ ವಿನಯ್, ಅಂಚೆ ಇನ್ಸಪೆಕ್ಟರ್ ಎಮ್. ಶಂಕರಪ್ಪ ಲಮಾಣಿ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭುಜಂಗಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ನಾರಾಯಣ ಎಸ್, ಆರೂರು ರಾಜು ಕುಲಾಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.



