ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯನ್ನೆದುರಿಸಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಹೆಲಿಪ್ಯಾಡ್ನಿಂದ ಕೃಷ್ಣಮಠದವರೆಗೆ ಮೋದಿ ಸಾಗುವ ಮಾರ್ಗದಲ್ಲಿ ಬಾಂಬ್ ಸ್ಕ್ವಾಡ್ ತಂಡಗಳು ತಪಾಸಣೆ ನಡೆಸುತ್ತಿದ್ದು, ಶ್ವಾನ ದಳವೂ ಇಂಚಿಂಚು ಪ್ರದೇಶ ಪರಿಶೀಲನೆ ಮಾಡುತ್ತಿದೆ. ಆದಿ ಉಡುಪಿ, ಕರಾವಳಿ, ಬನ್ನಂಜೆ ಸಿಟಿ ಬಸ್ ನಿಲ್ದಾಣ ಮತ್ತು ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಿಶೇಷ ಕಣ್ಗಾವಲು ಇಡಲಾಗಿದೆ.

ಲಕ್ಷ ಕಂಠ ಗೀತಾಪಾರಾಯಣಕ್ಕೆ ಮೋದಿ ಆಗಮನ

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯುವ ಲಕ್ಷ ಕಂಠ ಭಗವದ್ಗೀತೆ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬರುವ ಪ್ರಧಾನಿ, ಅಲ್ಲಿಂದ ಉಡುಪಿಗೆ ಸೇನಾ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ.

ಮೋದಿ ಬಳಸಿ ಬರುವ ಮೂರು ಹೆಲಿಕಾಪ್ಟರ್ಗಳು ಏಕಕಾಲಕ್ಕೆ ಇಳಿಯುವ ಸಂದರ್ಭಕ್ಕಾಗಿ, ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಆದಿ ಉಡುಪಿಯಲ್ಲಿರುವ ಹೆಲಿಪ್ಯಾಡ್ ಆವರಣದಲ್ಲಿ ಹಾಗೂ ಹೊರಭಾಗದಲ್ಲಿ ಹೊಸ ವಿಶಾಲ ರಸ್ತೆ ನಿರ್ಮಾಣ ಮಾಡಲಾಗಿದೆ.



