ಉಡುಪಿ: ರಾಣಿ ಅಬ್ಬಕ್ಕನ ವಿರೋಜಿತ ಜೀವನಶೈಲಿ ಇಂದಿನ ಯುವಕ–ಯುವತಿಯರಿಗೆ ಮಹತ್ತರ ಪ್ರೇರಣೆಯಾಗಬಲ್ಲುದು. ಈ ನೆಲದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಪೋರ್ಚುಗೀಸರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅವರ ಕುಶಾಗ್ರಮತಿ ವ್ಯಕ್ತಿತ್ವ ರೋಮಾಂಚನಕಾರಿಯಾಗಿದೆ. ರಾಣಿ ಅಬ್ಬಕ್ಕನ ಸಾಹಸಗಾಥೆಯನ್ನು ಸ್ಮರಿಸುವುದರಿಂದ ನಮ್ಮೊಳಗಿನ ನಾಡು, ನುಡಿ, ನೆಲದ ಅಭಿಮಾನ ಸದಾ ಜಾಗೃತವಾಗಿರುತ್ತದೆ. ಇಂತಹ ಮಹಾನ್ ಸಾಹಸಿಗಳ ಬದುಕು ಇಂದಿನ ತುರ್ತು ಅಗತ್ಯ ಎಂದು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸಂಶೋಧಕ ಪ್ರೊ. ಜಯರಾಮ ಶೆಟ್ಟಿಗಾರ್ ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ ಮತ್ತು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು) ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಅಬ್ಬಕ್ಕ @ 500 – ಪ್ರೇರಣಾದಾಯಿ ಉಪನ್ಯಾಸದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಗೀತಾನಂದ ಫೌಂಡೇಶನ್, ಮಣೂರಿನ ಪ್ರವರ್ತಕರಾದ ಆನಂದ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ರಾಣಿ ಅಬ್ಬಕ್ಕನನ್ನು ಸ್ಮರಿಸುವುದು ಮತ್ತು ಇತಿಹಾಸವನ್ನು ಮನನ ಮಾಡುವುದು ಇಂದಿನ ಯುವಪೀಳಿಗೆಗೆ ಪ್ರೇರಣಾದಾಯಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.) ಉಡುಪಿ ವಿಭಾಗದ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿಗಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸೌಪರ್ಣಿ ಮತ್ತು ತಂಡ ತೃತೀಯ ಬಿ.ಕಾಂ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಶಾಂತೇಶ ತಳವಾರ ಸ್ವಾಗತಿಸಿ, ಇಂಗ್ಲಿಷ್ ಉಪನ್ಯಾಸಕಿ ಕು. ಸುಷ್ಮಾ ವಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಯಿತು.



