ಉಡುಪಿ: ಜಿಲ್ಲೆಯ ವಿವಿಧ ದೇವಾಲಯಗಳಿಗೆ ಪಾದಯಾತ್ರೆಯ ಮೂಲಕ ಭೇಟಿ ನೀಡುವ “ಟೆಂಪಲ್ ವಾಕ್” ತಂಡದ 129ನೇ ಪಾದಯಾತ್ರೆ ಇತ್ತೀಚೆಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬಾರಿ ಉಡುಪಿ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾದಿರಾಜ ಶೆಟ್ ಅವರ ನೇತೃತ್ವದಲ್ಲಿ ತಂಡವು ಕಾಪು ಶ್ರೀ ಹೊಸ ಮಾರಿಗುಡಿ (ಮಾರಿಯಮ್ಮ) ದೇವಾಲಯದತ್ತ ನಡಿಗೆಯಾತ್ರೆ ಕೈಗೊಂಡಿತು.

ಜಿಲ್ಲೆಯಾದ್ಯಂತ ಪ್ರಸಿದ್ಧ ದೇವಾಲಯಗಳಿಗೆ ಈಗಾಗಲೇ 128 ಪಾದಯಾತ್ರೆಗಳನ್ನು ಪೂರ್ಣಗೊಳಿಸಿರುವ ಈ ತಂಡದಲ್ಲಿ ಸುಮಾರು 60ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪ್ರತೀ ತಿಂಗಳ ಮೊದಲ ಭಾನುವಾರ ನಡೆಯುವ ಈ ಪಾದಯಾತ್ರೆಯು ಭಕ್ತರಿಗೆ ದೈವಭಕ್ತಿ ಜೊತೆಗೆ ಶಾರೀರಿಕ, ಮಾನಸಿಕ ಉತ್ಸಾಹ ನೀಡುವುದೇ ಇದರ ಉದ್ದೇಶವಾಗಿದೆ.

ಈ ಬಾರಿ ನಡೆದ ಪಾದಯಾತ್ರೆಯಲ್ಲಿ ಮಣಿಪಾಲದ ವಿದ್ಯಾರ್ಥಿನಿಯರ ಜೊತೆಗೆ ಅರುಣಾಚಲ ಪ್ರದೇಶದ ಯುವತಿಯೂ ಭಾಗವಹಿಸಿದ್ದರು. ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಶ್ರೀದೇವಿಯಲ್ಲಿ ಪೂಜೆ ನೆರವೇರಿಸಿ ಭಾಗವಹಿಸಿದ ಎಲ್ಲರಿಗೂ ದೇವಿಯ ಅನುಗ್ರಹ ಪ್ರಸಾದ ವಿತರಿಸಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಟೆಂಪಲ್ ವಾಕ್ ತಂಡದ ಹಿರಿಯ ಸದಸ್ಯರು ಸತೀಶ್ ಬಂಗೇರ, ನಿತಿನ್ ಪೈ, ದಿನೇಶ್, ಸುಭಾಷ್ ನಾಯ್ಕ್ ದಂಪತಿ, ಕಾರ್ತಿಕ್ ಕಾಮತ್, ಶಿವಾನಂದ ಕಿಣಿ, ಅಮರನಾಥ್, ಸದಾನಂದ ಅಮೀನ್ ಹಾಗೂ ತಿಲಕ್ ರಾಜ್ ಸೇರಿದಂತೆ ಹಲವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.



