ಉಡುಪಿ : ಶೈಕ್ಷಣಿಕವಾಗಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಉದ್ಯೋಗ ಪ್ರಾಪ್ತಿ ಮತ್ತು ಉದ್ಯಮಶೀಲತೆಯಲ್ಲೂ ಗಮನಾರ್ಹ ಸಾಧನೆ ಮಾಡಿ ರಾಜ್ಯಕ್ಕೇ ಮಾದರಿಯಾಗಬೇಕು. ಜಿಲ್ಲೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.

ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಹಂತಗಳಲ್ಲೇ ಮಕ್ಕಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಕೌಶಲ್ಯಾಧಾರಿತ ಹಾಗೂ ಉದ್ಯಮಶೀಲತೆಯನ್ನು ಬೆಳೆಸುವಂತಹ ತರಬೇತಿ ನೀಡುವಲ್ಲಿ ಜಿಲ್ಲೆಯ ಎಲ್ಲ ವಿದ್ಯಾ ಸಂಸ್ಥೆಗಳು ಮತ್ತು ಐಟಿಐಗಳು ಮುತುವರ್ಜಿ ವಹಿಸಬೇಕು. ಯುವನಿಧಿ ಯೋಜನೆಯಡಿ 3962 ಅಭ್ಯರ್ಥಿಗಳು ನೋಂದಣಿಯಾಗಿದ್ದು ಇವರಲ್ಲಿ 2088 ಅಭ್ಯರ್ಥಿಗಳು ಫಲಾನುಭವಿಗಳಾಗಿದ್ದು ಈ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಯುವನಿಧಿ ಪ್ಲಸ್ ಕಾರ್ಯಕ್ರಮದಡಿ 65 ಯುವನಿಧಿ ಫಲಾನುಭವಿಗಳಿಗೆ ತರಬೇತಿ ನೀಡಲಾಗಿದ್ದು ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದಲ್ಲಿ ಈ ಸಂಖ್ಯೆ ಬಹಳ ಕಡಿಮೆ ಇದ್ದು ಇದನ್ನು ಹೆಚ್ಚಿಸುವಂತೆ ಕೆಜಿಟಿಟಿಐ, ಜೆಟಿಟಿಸಿ ಮತ್ತು ಸಿಡ್ಹಾಕ್ ಸಂಸ್ಥೆಗಳಿಗೆ ಸೂಚನೆ ನೀಡಿದರು.

ನಲ್ ಜಲ್ ಮಿತ್ರ ಯೋಜನೆಯ ಮೂಲಕ 155 ಗ್ರಾಮ ಪಂಚಾಯತಿಗಳಲ್ಲಿ 86 ಪಂಚಾಯತ್ ಗಳು 144 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು 135 ಅಭ್ಯರ್ಥಿಗಳಿಗೆ ಟೂಲ್ ಕಿಟ್ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಅದರಲ್ಲೂ 35 ವಯಸ್ಸಿನ ಕೆಳಗಿನ ಮಹಿಳೆಯರು ಅಸಾಧಾರಣ ಕೌಶಲ್ಯದ ಭಾಗವಾಗಿ ಪ್ಲಬಿಂಗ್ ನಂತಹ ಉದ್ಯೋಗಗಳಲ್ಲಿ ಪರಿಣತಿಯನ್ನು ಪಡೆಯುವ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದ್ದು ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗುವಂತೆ ಪಂಚಾಯತ್ ಪಿಡಿಓಗಳು ಕಾರ್ಯನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ ಗದ್ಯಾಳ, ಉದ್ಯೋಗ ವಿನಿಮಯ ಅಧಿಕಾರಿಗಳು, ಐಟಿಐ ಸಂಸ್ಥೆಗಳ ಪ್ರಾಂಶುಪಾಲರು, ಡಿಡಿಪಿಐ, ಡಿಡಿಪಿಯು, ಸಿಡ್ಹಾಕ್ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.


