ಉಡುಪಿ : ಜಗದ್ವಿಖ್ಯಾತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಜರಗುವ ಶ್ರೀ ಕೃಷ್ಣಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ ಸಂಪನ್ನ ಗೊಂಡಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭಗೊಂಡ ವಿಟ್ಲಪಿಂಡಿ ಉತ್ಸವ, ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾಯಾತ್ರೆ ಯಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು, ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರು ಹಾಗೂ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥರು ಪಾಲ್ಗೊಂಡರು.

ಶ್ರೀಕೃಷ್ಣಾಷ್ಟಮಿಯ ಹಿನ್ನಲೆಯಲ್ಲಿ ಭಾನುವಾರ ತಡರಾತ್ರಿ 12:11ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ತುಳಸಿ ಸನ್ನಿಧಿಯಲ್ಲಿ ಚಂದ್ರನಿಗೆ ಅರ್ಘ್ಯಪ್ರಧಾನ ಮಾಡಿದರು. ಬಳಿಕ ಪುತ್ತಿಗೆ ಕಿರಿಯ ಯತಿಗಳು ಹಾಗೂ ಇತರರು ಅರ್ಘ್ಯ ಪ್ರದಾನ ಮಾಡಿದರು. ಸೋಮವಾರ ಮಧ್ಯಾಹ್ನ ವೇಳೆಗೆ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಸ್ವರ್ಣ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು, ಸಾಂಪ್ರದಾಯಿಕ ವೇಷದ ಗೊಲ್ಲರು ರಥಬೀದಿಯ ಸುತ್ತಲೂ ಅಲ್ಲಲ್ಲಿ ನಿಲ್ಲಿಸಲಾಗಿದ್ದ ಗುರ್ಜಿಯಲ್ಲಿ ಕಟ್ಟಲಾಗಿದ್ದ ಮೊಸರು ಕುಡಿಕೆಗಳನ್ನು ಒಡೆಯುವ ಮೂಲಕ ಸಂಭ್ರಮಿಸಿದರು. ದೇಶ ವಿದೇಶಗಳಿಂದ ಬಂದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ನೆನಪಿಸುವ ಶ್ರೀಕೃಷ್ಣಲೀಲೋತ್ಸವ, ವಿಟ್ಲಪಿಂಡಿ, ಮೊಸರುಕುಡಿಕೆ ಸಂಭ್ರಮದಲ್ಲಿ ಸಂಪನ್ನಗೊಂಡಿತು.

ಅಷ್ಟಮಿ ಸಂಭ್ರಮಕ್ಕೆ ಸಾಕ್ಷಿಯಾಗಲು ಬಂದ ಭಕ್ತ ಸಾಗರಕ್ಕೆ ಶ್ರೀಕೃಷ್ಣನ ನೈವೇದ್ಯ ಉಂಡೆ, ಚಕ್ಕುಲಿ ಹಾಗೂ ಹಣ್ಣು ಹಂಪಲುಗಳನ್ನು ಸ್ವಾಮೀಜಿಗಳು ವಿತರಿಸಿದರು. ಮೆರವಣಿಗೆಯ ಮುಕ್ತಾಯ ಬಳಿಕ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು. ಶೋಭಾಯಾತ್ರೆಯಲ್ಲಿ ತಟ್ಟಿರಾಯ, ವಾದ್ಯ, ಕೊಂಬು ನಗಾರಿ, ಕೃಷ್ಣ ವೇಷ, ರಕ್ಕಸರ ವೇಷ, ಹುಲಿ ವೇಷ, ಚಂಡೆ ಹೀಗೆ ವಿವಿಧ ವೇಷಗಳ ಅಬ್ಬರ ಕಂಡು ಬಂತು. 13 ವರ್ಷಗಳಿಂದ ಶ್ರೀಸಾಯಿಲಕ್ಷ್ಮೀ ಉಡುಪಿ ಸಂಸ್ಥೆಯ ಸಂಯೋಜನೆಯಲ್ಲಿ ಮುಂಬಯಿಯ ಪ್ರಸಿದ್ಧ ಅಲಾರೆ ಗೋವಿಂದ ತಂಡ ಸಾಂತಕ್ರೂಸ್ ಪೂರ್ವದ ಬಾಲಮಿತ್ರ ವ್ಯಾಯಾಮ ಶಾಲೆಯ 200 ಮಂದಿ ಅಲಾರೆ ಗೋವಿಂದ ತಂಡದ ಸದಸ್ಯರು ಇಂದು ನಗರದ ವಿವಿದೆಡೆಗಳಲ್ಲಿ 10 ಪ್ರದರ್ಶನವನ್ನು ನೀಡಿ ಜನರ ಮನರಂಜಿಸಿದರು.



