ಕೋಟ: ಮಳೆಗಾಳದ ಆರಂಭದ ಬಳಿಕ ಬಹುತೇಕ ಕಡಿಮೆಯಾಗಿದ್ದ ಚಿರತೆ ಹಾವಳಿ ಸದ್ಯ ಮತ್ತೆ ಕಾಣಿಸಿಕೊಂಡಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ, ಕುಂಭಾಶಿ ಮತ್ತು ಮೂಡುಗೋಪಾಡಿ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರು ಆತಂಕಿತರಾಗಿದ್ದಾರೆ.

ವಕ್ವಾಡಿ ಬಳಿ ಸಂಜೆಯ ವೇಳೆ ಚಿರತೆ ಕಾಣಿಸಿಕೊಳ್ಳುತ್ತಿದೆ ಎನ್ನುವ ಮಾತುಗಳು ಇತ್ತೀಚೆಗೆ ಆ ಭಾಗದಲ್ಲಿ ಕೇಳಿ ಬಂದಿತ್ತು. ಆದರೆ ಅದು ಸತ್ಯ ಎನ್ನುವದಕ್ಕೆ ಪೂರಕವಾಗಿ, ಈ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಚಿರತೆ ಸೆರೆಯಾಗಿದೆ. ತಡರಾತ್ರಿ ಕುಂಭಾಶಿಯ ಖಾಲಿದ್ ಎಂಬವರ ಗುಜರಿ ಗೋಡೌನ್ ಮುಂಭಾಗದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಗಾಬರಿ ಹುಟ್ಟಿಸಿದೆ.
ಇಲ್ಲಿನ ಸ್ಥಳೀಯರು ಹೇಳುವಂತೆ ಇಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು ಈಗಾಗಲೇ ಹಲವು ನಾಯಿಗಳನ್ನು ಚಿರತೆ ಬಲಿ ಪಡೆದಿದೆ. ಇಲ್ಲಿ ಹೈನುಗಾರಿಕೆ ನಡೆಸುವವರ ಮನೆಯ ಹಸುಗಳ ಮೇಲು ಚಿರತೆ ಧಾಳಿ ನಡೆಸಿದೆ ಎನ್ನಲಾಗಿದೆ. ಯಾವುದೇ ಅವಘಡಗಳು ಮುಂದುವರಿಯುವ ಮೊದಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚಿರತೆ ಹಿಡಿಯುವ ಬೋನು ಇರಿಸಿ, ಚಿರತೆ ಸೆರೆ ಹಿಡಿದು ಸ್ಥಳೀಯರಿಗೆ ನೆಮ್ಮದಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



