ಗಂಗೊಳ್ಳಿ : ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಮೀನುಗಾರರು ನೀರು ಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಮೀನುಗಾರನ ಶವ ಗುರುವಾರ ಮುಂಜಾನೆ ಪತ್ತೆಯಾಗಿದೆ. ಸುರೇಶ್ ಖಾರ್ವಿ ಮೃತದೇಹ ಗುರುವಾರ ಮುಂಜಾನೆ ಕುಂದಾಪುರ ಕೋಡಿ ಸೀವಾಕ್ ಸಮೀಪ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಗಂಗೊಳ್ಳಿ ಬಂದರಿನಿಂದ ಜುಲೈ 15ರಂದು ಬೆಳಿಗ್ಗೆ ಮೀನುಗಾರಿಕೆಗೆ ಹೊರಟಿದ್ದ ಶ್ರೀ ಹಕ್ರೇಮಠ ಯಕ್ಷೇಶ್ವರಿ ಎಂಬ ಗಿಲ್‌ನೆಟ್ ನಾಡ ದೋಣಿ ಸಮುದ್ರ ಪ್ರಕ್ಷುಬ್ಧವಾದ ಹಿನ್ನಲೆಯಲ್ಲಿ ಮಗುಚಿತ್ತು. ಈ ಸಂದರ್ಭ ದೋಣಿಯಲ್ಲಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದ, ಉಳಿದ ಮೂವರು ಮೀನುಗಾರರಾದ ಜಗನ್ನಾಥ ಖಾರ್ವಿ, ಲೋಹಿತ್ ಖಾರ್ವಿ ಮತ್ತು ಸುರೇಶ್ ಖಾರ್ವಿ ಹುಡುಕಾಟ ನಡೆಸಲಾಗಿತ್ತು. ಬುಧವಾರ ಮುಂಜಾನೆ ಕೋಡಿ ಲೈಟ್ ಹೌಸ್ ಸಮೀಪದಲ್ಲಿ ಲೋಹಿತ್ ಖಾರ್ವಿ ಮೃತದೇಹ, ಸಂಜೆ ವೇಳೆಗೆ ಹಳೆಅಳಿವೆ ಎಂಬಲ್ಲಿ ಜಗನ್ನಾಥ್ ಖಾರ್ವಿ ಮೃತದೇಹ ಪತ್ತೆಯಾಗಿತ್ತು. ಸುರೇಶ ಖಾರ್ವಿ ಪತ್ತೆಯಾಗಿ ತೀವ್ರ ಹುಡಕಾಟ ಮುಂದುವರಿಸಲಾಗಿತ್ತು.


