ಉಡುಪಿ: ಕರ್ನಾಟಕ ಸರ್ಕಾರ 2022ರಲ್ಲಿ ಜಾರಿಗೊಳಿಸಿದ್ದ ಸಮಾನವಸ್ತ್ರ ಸಂಬಂಧಿತ ಆದೇಶವನ್ನು ಹಿಂಪಡೆದು ಹೊಸ ಅಧಿಕೃತ ಆದೇಶ ಹೊರಡಿಸಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದು ಕಡೆಯಲ್ಲಿ ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸಾಧಿ ಸಾಮಾಜಿಕ ಜಾಲತಾಣದಲ್ಲಿ ಸಂತಸದ ಹಂಚಿಕೊಂಡಿದ್ದಾರೆ.

ಹೊಸ ಆದೇಶದ ಪ್ರಕಾರ ಶಾಲೆ ಮತ್ತು ಕಾಲೇಜುಗಳಲ್ಲಿ ಸೀಮಿತ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಚಿಹ್ನೆಗಳನ್ನು ಧರಿಸಲು ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಹಿಜಾಬ್ ಹಾಗೂ ಪವಿತ್ರ ದಾರ ಸೇರಿದಂತೆ ಧಾರ್ಮಿಕ ಚಿಹ್ನೆಗಳನ್ನು ಸಮಾನವಸ್ತ್ರದ ಜೊತೆಗೆ ಧರಿಸಬಹುದೆಂದು ಸರ್ಕಾರ ಸ್ಪಷ್ಟನೆ ನೀಡಿದೆ ಎನ್ನಲಾಗಿದೆ. ವಿದ್ಯಾರ್ಥಿಗಳಿಗೆ ಈ ಕಾರಣದಿಂದ ಪ್ರವೇಶ ನಿರಾಕರಿಸಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಶಿಸ್ತು, ಭದ್ರತೆ ಹಾಗೂ ಗುರುತು ಪರಿಶೀಲನೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಷರತ್ತನ್ನೂ ವಿಧಿಸಲಾಗಿದೆ.

ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಿಜಾಬ್ ವಿಚಾರದಲ್ಲಿ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದ ಆಲೀಯಾ ಅಸಾದಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದು, ಅಲ್‌ಹಮ್ದುಲಿಲ್ಲಾ, ಸದಾ ಮತ್ತು ಎಂದೆಂದಿಗೂ ಎಂದು ಬರೆದು ಸಂಭ್ರಮ ಹಂಚಿಕೊಂಡಿದ್ದಾರೆ.



