ಉಡುಪಿ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಕಿ ಉಳಿದಿರುವ ಸರ್ವೀಸ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವಂತೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ಮಣಿಪಾಲ ರಜತಾದ್ರಿಯ ಸಂಸದರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಬಂಧಿಸಿದ ಸರ್ವೀಸ್ ರಸ್ತೆ, ಮೇಲ್ಸೇತುವೆ, ಅಂಡರ್ಪಾಸ್ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಾಕಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಅಗತ್ಯ. ಕಾಮಗಾರಿಗಳ ಗುಣಮಟ್ಟ ಹಾಗೂ ಸಂಚಾರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಸದರು ಸೂಚಿಸಿದರು.

ಜಿಲ್ಲೆಯಲ್ಲಿ ಕೋಟೇಶ್ವರ ಜಂಕ್ಷನ್ನಿಂದ ಬೀಜಾಡಿ ಕ್ರಾಸ್ವರೆಗೆ ಸುಮಾರು 830 ಮೀಟರ್, ಅನ್ನಪೂರ್ಣ ಹೋಟೆಲ್ನಿಂದ ಬೀಜಾಡಿ–ಕುಂಭಾಶಿ–ತೆಕ್ಕಟ್ಟೆ ಭಾಗದಲ್ಲಿ ಎರಡೂ ಬದಿಗಳಲ್ಲಿ ಸುಮಾರು 3,500 ಮೀಟರ್, ತೆಕ್ಕಟ್ಟೆಯಲ್ಲಿ 1,020 ಮೀಟರ್, ಬ್ರಹ್ಮಾವರದಲ್ಲಿ 400 ಮೀಟರ್, ಸಂತೆಕಟ್ಟೆಯಲ್ಲಿ 1,000 ಮೀಟರ್ ಹಾಗೂ ಉದ್ಯಾವರ ಜಂಕ್ಷನ್ನಲ್ಲಿ 325 ಮೀಟರ್ ಸೇರಿದಂತೆ ವಿವಿಧೆಡೆ ಬಾಕಿ ಇರುವ ಸರ್ವೀಸ್ ರಸ್ತೆ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು.ಹಲವು ಕಡೆಗಳಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಚರಂಡಿ ವ್ಯವಸ್ಥೆಯಲ್ಲಿಯೂ ಲೋಪಗಳು ಕಂಡುಬರುತ್ತಿವೆ. ಹೀಗಾಗಿ ರಸ್ತೆ ನಿರ್ಮಾಣದ ಜತೆಗೆ ಚರಂಡಿ ಹಾಗೂ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನೂ ಸಮರ್ಪಕವಾಗಿ ಕೈಗೊಳ್ಳಬೇಕು ಎಂದರು.

ಉಡುಪಿಯ ನಿಟ್ಟೂರು ಹಾಗೂ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಬಳಿ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆದು ಫುಟ್ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ಸಂತೆಕಟ್ಟೆ ಪೆಟ್ರೋಲ್ ಬಂಕ್ನಿಂದ ಅಂಬಾಗಿಲು ಜಂಕ್ಷನ್ವರೆಗೆ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮರಗಳ ತೆರವು ಕಾರ್ಯ ಆರಂಭವಾಗಿದೆ. ಕಿನ್ನಿಮೂಲ್ಕಿಯಿಂದ ಅಂಬಲಪಾಡಿ ಸಂಪರ್ಕಿಸುವ ರಸ್ತೆ ತೀವ್ರ ಹದಗೆಟ್ಟಿರುವ ಕುರಿತು ವರದಿಯಾಗಿದ್ದು, ತಕ್ಷಣ ತಾತ್ಕಾಲಿಕ ದುರಸ್ತಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಕೇರಳ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಕುಂದಾಪುರದಿಂದ ತಲಪಾಡಿವರೆಗೆ ಅಪಘಾತರಹಿತ ರಸ್ತೆ ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಸಂಸದರು ಹೇಳಿದರು.
ಕಟಪಾಡಿ ಅಂಡರ್ಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಇನ್ನೊಂದು ಬದಿಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿಯ ಮಧ್ಯಭಾಗದಿಂದ ಎರಡೂ ಬದಿಯಲ್ಲಿ 75 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಬಾರದು ಎಂಬ ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಿ ಕಾನೂನು ಚೌಕಟ್ಟಿನಲ್ಲಿ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲಾಗುವುದು ಎಂದರು. ಸಭೆಯಲ್ಲಿ ಎನ್ಎಚ್ಎಐ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಆಜ್ಮಿ, ಎನ್ಎಚ್ಎಐ ಕನ್ಸಲ್ಟೆಂಟ್ ಪ್ರೆಸಿಡೆಂಟ್ ಇಂಜಿನಿಯರ್ ಅಲೋಕ್ ಎಂ., ಕನ್ಸಲ್ಟೆಂಟ್ ಟೀಮ್ ಲೀಡರ್ ಎನ್.ಆರ್. ಗೋಸ್ವಾಮಿ, ಧ್ರುವ್ ಕನ್ಸಲ್ಟೆನ್ಸಿಯ ಎ.ಎಚ್.ಇ. ವಿಘ್ನೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.


