Tuesday, June 2, 2026

spot_img

ಯುವ ಯಕ್ಷಗಾನ ಕಲಾವಿದರ ಮಾರ್ಗದರ್ಶಿ ಶಿಬಿರಕ್ಕೆ ಚಾಲನೆ

ಉಡುಪಿ : ಯಕ್ಷಗಾನ ಕಲಾರಂಗದ ವತಿಯಿಂದ ವೃತ್ತಿ ಮೇಳದ ಯುವ ಕಲಾವಿದರಿಗಾಗಿ ಆಯೋಜಿಸಲಾದ ನಾಲ್ಕು ದಿನಗಳ ಯಕ್ಷಗಾನ ಮಾರ್ಗದರ್ಶಿ ಶಿಬಿರಕ್ಕೆ ಮಂಗಳವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಚಾಲನೆ ನೀಡಲಾಯಿತು. ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನದಂತಹ ಶೈಲೀಕೃತ ಕಲೆಯು ತನ್ನ ಪರಂಪರೆಯನ್ನು ಉಳಿಸಿಕೊಂಡು, ಕಾಲಾನುಗುಣವಾಗಿ ಹೊಸತನವನ್ನು ಅಳವಡಿಸಿಕೊಂಡು ಬೆಳೆಯಬೇಕಾಗಿದೆ. ಇದಕ್ಕೆ ಪ್ರಜ್ಞಾವಂತ ಕಲಾವಿದರ ಕೊಡುಗೆ ಅಗತ್ಯವಾಗಿದ್ದು, ಇಂತಹ ಮಾರ್ಗದರ್ಶಿ ಶಿಬಿರಗಳು ಕಲಾವಿದರ ಪ್ರತಿಭೆ ಮತ್ತು ಜ್ಞಾನವನ್ನು ವೃದ್ಧಿಸಲು ಪೂರಕವಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿದ್ವಾಂಸ ದಿವಾಕರ ಹೆಗಡೆ ಕೆರೆಹೊಂಡ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಸಾಧ್ಯತೆಗಳಿದ್ದು, ಅಧ್ಯಯನಶೀಲ ಕಲಾವಿದರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯ ಮೂಲಕ ಹೊಸ ಆಯಾಮಗಳನ್ನು ಸೃಷ್ಟಿಸಬಹುದು ಎಂದರು. ಆಹಾರ್ಯ, ಆಂಗಿಕ, ವಾಚಿಕ ಹಾಗೂ ಸಾತ್ವಿಕ ಅಭಿನಯದ ನಾಲ್ಕು ಅಂಶಗಳನ್ನು ಸಮರ್ಪಕವಾಗಿ ಅಭಿವ್ಯಕ್ತಿಸಿದಾಗ ಯಕ್ಷಗಾನದ ಸೌಂದರ್ಯ ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

MALYADI_CLICKK

ವೇದಿಕೆಯಲ್ಲಿ ಹಿರಿಯ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಎ.ಪಿ. ಪಾಠಕ್, ಯಕ್ಷಗಾನ ಕಲಾರಂಗದ ಸದಸ್ಯರಾದ ಪ್ರೊ. ಕೆ. ಸದಾಶಿವ ರಾವ್ ಹಾಗೂ ಪ್ರೊ. ಎಂ.ಎಲ್. ಸಾಮಗ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷರೂ ಶಿಬಿರದ ಪ್ರಾಯೋಜಕರೂ ಆದ ಎಂ. ಗಂಗಾಧರ ರಾವ್ ಶಿಬಿರದ ಉದ್ದೇಶವನ್ನು ವಿವರಿಸಿ ಸ್ವಾಗತಿಸಿದರು. ಶಿಬಿರದ ನಿರ್ದೇಶಕ ಪವನ್ ಕಿರಣ್ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿದ್ದು, ಜತೆ ಕಾರ್ಯದರ್ಶಿ ವಿದ್ಯಾಪ್ರಸಾದ್ ವಂದಿಸಿದರು. ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

MALYADI_CLICKK

ನಾಲ್ಕು ದಿನಗಳ ಈ ಶಿಬಿರದಲ್ಲಿ ಯುವ ಕಲಾವಿದರಿಗೆ ಯಕ್ಷಗಾನದ ವಿವಿಧ ಆಯಾಮಗಳ ಕುರಿತು ತರಬೇತಿ, ಮಾರ್ಗದರ್ಶನ ಹಾಗೂ ವಿಚಾರ ಸಂಕಿರಣಗಳು ನಡೆಯಲಿವೆ. ಶಿಬಿರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಯುವ ಯಕ್ಷಗಾನ ಕಲಾವಿದರು ಭಾಗವಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles