ಉಡುಪಿ : ಯಕ್ಷಗಾನ ಕಲಾರಂಗವು ತನ್ನ ಸೇವಾ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದು, 96ನೇ ಮನೆಯನ್ನು ವಿದ್ಯಾರ್ಥಿನಿ ಮಾನ್ಯ ಎಂ. ಅವರಿಗೆ ಹಸ್ತಾಂತರಿಸಿತು. ಬೈಂದೂರು ತಾಲೂಕಿನ ಪಡುವರಿಯಲ್ಲಿ ಪುನರ್‌ನವೀಕರಣಗೊಂಡ ಭಾನು ಎಂಬ ಮನೆಯನ್ನು ಉದ್ಘಾಟಿಸಲಾಯಿತು.

ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಹಾಗೂ ಕಾರ್ಕಳ ಕಲ್ಮಠದ ಶ್ರೀ ದೇವಾನಂದ ಉಪಾಧ್ಯಾಯ ಮತ್ತು ಅವರ ಪತ್ನಿ ನಮಿತಾ ಉಪಾಧ್ಯಾಯ ಅವರ ಪ್ರಾಯೋಜಕತ್ವದಲ್ಲಿ ಈ ಮನೆ ನಿರ್ಮಾಣಗೊಂಡಿದೆ. ಈ ಮನೆ ದೇವಾನಂದ ಉಪಾಧ್ಯಾಯರ ಮಾತಾಪಿತರಾದ ಸತ್ಯಭಾಮ ಮತ್ತು ವೆಂಕಟನರಸಿಂಹ ಉಪಾಧ್ಯಾಯರ ಸ್ಮರಣಾರ್ಥ ಸಮರ್ಪಿಸಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿರುವ ಮಾನ್ಯ ಎಂ. ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 99.36 ಶೇಕಡಾ ಅಂಕ ಗಳಿಸಿ ಗಮನಸೆಳೆದಿದ್ದು, ಶ್ರೀಮತಿ ಪದ್ಮಾವತಿ ಹಾಗೂ ದಿವಂಗತ ಮಹಾಬಲ ಮರಕಾಲ ಅವರ ಪುತ್ರಿಯಾಗಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವಾನಂದ ಉಪಾಧ್ಯಾಯ, ಸಮಾಜದಲ್ಲಿ ಸಾಮರ್ಥ್ಯವಿರುವವರು ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಕರ್ತವ್ಯ. ಯಕ್ಷಗಾನ ಕಲಾರಂಗದಂತಹ ಸಂಸ್ಥೆಗಳು ಮಾಡುತ್ತಿರುವ ಸೇವಾಕಾರ್ಯಗಳಿಗೆ ಕೈಜೋಡಿಸುವ ಮೂಲಕ ನಾವು ಸಮಾಜದ ಋಣ ತೀರಿಸಬೇಕು ಎಂದರು. ಸಂದೀಪನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸಂಜೀತ್ ಪ್ರಕಾಶ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಂದೀಪನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ನ್ಯಾಯವಾದಿ ದೇವರಾಜ ಶೆಟ್ಟಿಗಾರ್, ಅಪ್ನಾ ಹಾಲಿಡೇಸ್‌ನ ಮರವಂತೆ ನಾಗರಾಜ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಯಕ್ಷಗಾನ ಕಲಾರಂಗದ ಪಾರದರ್ಶಕ ಸೇವಾ ಮನೋಭಾವವನ್ನು ಕೊಂಡಾಡಿದರು.

ಯಕ್ಷಗಾನ ಕಲಾರಂಗದ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ್ ಉಪಾಧ್ಯಾಯ, ಹಿರಿಯಣ್ಣ ಕಿದಿಯೂರು, ಪ್ರಭಾಕರ ಬಂಡಿ ಹಾಗೂ ಪ್ರಸನ್ನ ಹೆಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಾನ್ಯಳ ಅಪೇಕ್ಷೆಯಂತೆ ಆಕೆಯ ನೆಚ್ಚಿನ ಶಿಕ್ಷಕಿ ಕವಿತಾ ಅವರ ಜನ್ಮದಿನವನ್ನು ಸಹ ಸರಳವಾಗಿ ಆಚರಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.



