ಉಡುಪಿ: ಮನುಷ್ಯ ತನ್ನ ಸಣ್ಣತನಗಳನ್ನು ತೊರೆದು ಮಾನವೀಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂಬುದು ಮೂಕಜ್ಜಿಯ ಕನಸು ಕಾದಂಬರಿಯ ಪ್ರಮುಖ ಸಂದೇಶವಾಗಿದೆ ಎಂದು ಲೇಖಕ ಪ್ರೊ. ಸ್ವೀವನ್ ಕ್ವಾಡ್ರಸ್ ಹೇಳಿದರು. ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ನಡೆದ ಅರಿವಿನ ಬೆಳಕು ಉಪನ್ಯಾಸ ಮಾಲೆ–13 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಮೂಕಜ್ಜಿಯ ಕನಸು – ಒಂದು ಚಿಂತನೆ’ ವಿಷಯದ ಕುರಿತಾಗಿ ಅವರು ಉಪನ್ಯಾಸ ನೀಡಿದರು.

ಮೂಕಿಯಾಗಿದ್ದರೂ ಪ್ರತಿಯೊಂದು ವಿಚಾರವನ್ನೂ ಪ್ರಶ್ನಿಸುವ ಮೂಕಜ್ಜಿ ಪಾತ್ರ ಮಾನವೀಯ ಮೌಲ್ಯಗಳನ್ನು ಸಮರ್ಥಿಸುವುದು ವಿಶೇಷವಾಗಿದೆ. ಸಮಾಜದಲ್ಲಿ ಇರುವ ಅಸಮಾನತೆ ಮತ್ತು ಮೌಢ್ಯಗಳನ್ನು ಪ್ರಶ್ನಿಸುವ ಧೈರ್ಯವನ್ನು ಈ ಕಾದಂಬರಿ ನೀಡುತ್ತದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಯುವುದು ಅತ್ಯಂತ ಅಗತ್ಯ. ಮೂಕಜ್ಜಿಯ ಕನಸು ಪುಸ್ತಕವು ಕ್ರಾಂತಿಕಾರಿ ಮನೋಭಾವವನ್ನು ಬೆಳೆಸುತ್ತದೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿ, ಡಾ. ಶಿವರಾಮ ಕಾರಂತರ ಸಾಹಿತ್ಯ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಮೂಡಿಸುತ್ತದೆ. ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಿಗೆ ಸಮಯ ವ್ಯರ್ಥ ಮಾಡದೇ ಓದು ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಲೋಕೇಶ್ ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಸತೀಶ್ ಕೊಡವೂರು ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



