ಉಡುಪಿ: ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಕುಂಜಿಬೆಟ್ಟು ಇವರ ನೇತೃತ್ವದಲ್ಲಿ ಮರಾಠಿ ಹೋಳಿ ಸಂಭ್ರಮ 2026 ಕಾರ್ಯಕ್ರಮವನ್ನು ಮಾರ್ಚ್ 1ರಂದು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮುಂಡ್ಕಿನ ಜೆಡ್ಡು ಆರ್.ಕೆ. ಪಾಟ್ಕರ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಸಂಚಾಲಕ ಉಮೇಶ್ ಎ. ನಾಯ್ಕ್ ಚೇರ್ಕಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಸುಮಾರು 136 ಹತ್ತರಕಟ್ಟೆಗಳ (ಹತ್ತು ಸಮಸ್ತರ ಕಟ್ಟೆ) 3 ಸಾವಿರಕ್ಕೂ ಅಧಿಕ ಮಂದಿ ಈ ಹೋಳಿ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಶೃಂಗೇರಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂನ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಇಲ್ಲಿಯವರೆಗೆ ಜಿಲ್ಲೆಯ ವಿವಿಧ ಹತ್ತರಕಟ್ಟೆಗಳವರು ತಮ್ಮ ತಮ್ಮ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಮೊದಲ ಬಾರಿಗೆ ಎಲ್ಲರೂ ಒಂದೇ ವೇದಿಕೆಯಲ್ಲಿ ಒಗ್ಗಟ್ಟಾಗಿ ಹೋಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷತೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್ ಚಾಂತಾರು, ವೆಂಕಟೇಶ್ ನಾಯ್ಕ್, ನಾರಾಯಣ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.



