Thursday, February 26, 2026

spot_img

ಭ್ರಷ್ಟಾಚಾರವನ್ನು ಬುಡ ಸಮೇತ ತೊಲಗಿಸಲು ಲೋಕಾಯುಕ್ತ ಸದಾ ಬದ್ಧ: ಉಪ ಲೋಕಾಯುಕ್ತ ಬಿ. ವೀರಪ್ಪ..

ಉಡುಪಿ : ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿದೊಡ್ಡ ಪಿಡುಗಾದ ಭ್ರಷ್ಟಾಚಾರವನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದೆ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು. ನಗರದ ಮಣಿಪಾಲದಲ್ಲಿರುವ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಅಧಿಕಾರಿಗಳು ಕಾಯ, ವಾಚ, ಮನಸ್ಸಿನಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಕೆಲಸಕ್ಕೆ ಸಾರ್ಥಕತೆ ಸಿಗುತ್ತದೆ. ಸಾರ್ವಜನಿಕ ವಲಯದಿಂದ ‘ಭ್ರಷ್ಟಾಚಾರ’ ಎಂಬ ಪದ ಅಂತ್ಯ ಕಾಣಬೇಕು. ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ ಲೋಕಾಯುಕ್ತ ಪ್ರಕರಣಗಳ ಇತ್ಯರ್ಥ ಪ್ರಕ್ರಿಯೆ ಮುಂದುವರಿದಿದ್ದು, ಉಡುಪಿ ಜಿಲ್ಲೆಯ 150 ಬಾಕಿ ಪ್ರಕರಣಗಳನ್ನು ಇಂದು ವಿಚಾರಣೆ ನಡೆಸಲಾಗುತ್ತಿದೆ. ಸುಳ್ಳು ದೂರು ನೀಡಿದವರ ಮೇಲೂ ಪ್ರಕರಣ ದಾಖಲಿಸಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣನವರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕರು (ವಿಚಾರಣೆ-1) ಅರವಿಂದ್ ಎನ್.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್, ಡಿ.ಎಫ್.ಓ ರುಥ್ರೇನ್ ಪಿ., ವೈಲ್ಡ್ ಲೈಫ್ ಡಿ.ಎಫ್.ಓ ಶಿವರಾಮ್ ಎಂ. ಬಾಬು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಲೇವಾರಿ ಸಭೆಯಲ್ಲಿ ಬನ್ನಂಜೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ಮೂಲಸೌಕರ್ಯ ಕೊರತೆ, ರಾಜ್ಯ ಮಹಿಳಾ ನಿಲಯದ ಅನಾಥರ ಸೌಲಭ್ಯ ಸಮಸ್ಯೆಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ವಸತಿ ಶಾಲೆಗಳ ಸೌಲಭ್ಯಗಳು, ಚಿತ್ರಪಾಡಿ ಶಾಲೆಯ ಅಡುಗೆ ಕೋಣೆ ಮತ್ತು ಶೌಚಾಲಯ ನ್ಯೂನತೆಗಳ ಕುರಿತು ಸ್ವಯಂ ಪ್ರೇರಿತ ದೂರುಗಳ ವಿಚಾರಣೆ ನಡೆಸಿ, ಸಮಸ್ಯೆಗಳು ಬಗೆಹರಿಸಿರುವ ಕುರಿತು ವರದಿ ಆಧರಿಸಿ ಕೆಲವು ಪ್ರಕರಣಗಳನ್ನು ಮುಕ್ತಾಯಗೊಳಿಸಲಾಯಿತು.

ಆರ್‌ಟಿಒ ಮತ್ತು ಉಪನೋಂದಣಾಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ದೂರುಗಳ ವಿಚಾರಣೆ ದೂರುದಾರರು ಹಾಜರಿರದ ಕಾರಣ ಮುಂದೂಡಲಾಯಿತು. ನಿವೃತ್ತ ಯೋಧರು, ಹುತಾತ್ಮ ಯೋಧರ ಅವಲಂಬಿತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ನಿವೇಶನ ವಿತರಣೆ ವಿಳಂಬದ ಕುರಿತು ದೂರುಗಳನ್ನು ಪರಿಶೀಲಿಸಿ, ನಿಯಮಾನುಸಾರ ವಿಳಂಬವಿಲ್ಲದೆ ನಿವೇಶನ ನೀಡಲು ಉಪ ವಿಭಾಗಾಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles