ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಕುಂದಾಪುರ–ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ನೀರು ತುಂಬಿ ಮುಳುಗಡೆಯಾದ ಘಟನೆಸಂಭವಿಸಿದೆ. ಬೋಟಿನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟಿನ ಮೀನುಗಾರರು ಹಾಗೂ ಕರಾವಳಿ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ರಕ್ಷಣೆ ಮಾಡಲಾದ ಮೀನುಗಾರರು.
ಫೆ.23ರ ರಾತ್ರಿ ಮಲ್ಪೆ ಬಂದರುದಿಂದ ಮೀನುಗಾರಿಕೆಗೆ ಹೊರಟ ಕೆಮ್ಮಣ್ಣಿನ ನಾಗರಾಜ್ ಪುತ್ರನ್ ಅವರಿಗೆ ಸೇರಿದ ಶ್ರೀ ದುರ್ಗಾಪರಮೇಶ್ವರಿ ಬೋಟಿನ ಅಡಿಭಾಗಕ್ಕೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ, ಎಂಜಿನ್‌ನ ಕೆಳಭಾಗದಿಂದ ನೀರು ಒಳನುಗ್ಗಲು ಆರಂಭಿಸಿತು. ಪರಿಣಾಮವಾಗಿ ಬೋಟಿನ ಎಂಜಿನ್ ಸ್ಥಗಿತಗೊಂಡಿತು. ಬೋಟಿನಲ್ಲಿದ್ದವರು ನೀರನ್ನು ಹೊರಹಾಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣ ಸಹಾಯಕ್ಕಾಗಿ ಸಂಪರ್ಕಿಸಿದ ಬಳಿಕ ಮಲ್ಪೆ ಬಂದರಿನಿಂದ ಶ್ರೀ ಕೃಷ್ಣ ಬೋಟಿನವರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಐವರನ್ನೂ ರಕ್ಷಿಸಿದ್ದಾರೆ.

ನಂತರ ಮುಳುಗುತ್ತಿರುವ ಬೋಟನ್ನು ಶ್ರೀ ಕೃಷ್ಣ ಬೋಟಿನವರು ಹಗ್ಗ ಕಟ್ಟಿ ಎಳೆದುಕೊಂಡು ಬರಲು ಪ್ರಯತ್ನಿಸಿದರು. ಆದರೆ ಗಂಗೊಳ್ಳಿ ಬಂದರಿನಿಂದ ಸುಮಾರು 8–9 ನಾಟಿಕಲ್ ಮೈಲು ದೂರದಲ್ಲಿ ಗಾಳಿ ಹಾಗೂ ಅಲೆಗಳ ಅಬ್ಬರದಿಂದ ಹಗ್ಗ ತುಂಡಾಗಿ, ಬೋಟು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಅಂದಾಜು 60–65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕ ನಾಗರಾಜ್ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.



