ಉಡುಪಿ : ರಬ್ಬರ್ ಟ್ಯಾಪಿಂಗ್ ವಿಚಾರದಲ್ಲಿ ಉಂಟಾದ ಜಗಳದ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಬಿಸಿ ಕೆಮಿಕಲ್ ಎರಚಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕೇರಳದ ಕಣ್ಣೂರು ಜಿಲ್ಲೆಯ ತಾಳಿಪುರಂ ನಿವಾಸಿ ರತೀಶ್ ಕೆ.ಟಿ. (42) ಕಠಿಣ ಕಾರಾಗೃಹ ಶಿಕ್ಷೆಗೆ ಒಳಗಾದ ಆರೋಪಿ.

ಕೇರಳದ ನಿವಾಸಿ ಸುಧೀರ್ ಪಿ.ಎ. ಅವರು 2022ರ ಫೆಬ್ರವರಿ 28ರಂದು ತಮ್ಮ ಕೆಲಸಗಾರ ರತೀಶ್ ಕೆ.ಟಿ. ಅವರೊಂದಿಗೆ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್ ಅಗಸ್ಟಿನ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಜೀಕುಮಾರ್ ಅವರ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಇಬ್ಬರೂ ಮದ್ಯಪಾನ ಮಾಡಿದ್ದು, ಕೆಲಸದ ವಿಚಾರವಾಗಿ ಪರಸ್ಪರ ವಾಗ್ವಾದ ನಡೆದಿದೆ. ನಶೆಯಲ್ಲಿದ್ದ ಇಬ್ಬರ ಮಧ್ಯೆ ಜಗಳ ಉಂಟಾಗಿತ್ತು. ಈ ವೇಳೆ ನಡೆದ ತಳ್ಳಾಟದಲ್ಲಿ ಸುಧೀರ್ ಅವರ ಕೈಬೆರಳು ರತೀಶ್ ಅವರ ಎಡ ಕಣ್ಣಿಗೆ ತಾಗಿತ್ತು ಎನ್ನಲಾಗಿದೆ.

ಈ ಘಟನೆಯ ಬಳಿಕ ಮಾರ್ಚ್ 2ರಂದು ಬೆಳಗಿನ ಜಾವ ಸುಮಾರು 1 ಗಂಟೆ ವೇಳೆಗೆ, ಚಾರ ಗ್ರಾಮದ ಮಂಡಾಡಿಜಡ್ಡು ಪ್ರದೇಶದಲ್ಲಿರುವ ಕಾರ್ಮಿಕರ ವಸತಿ ಸ್ಥಳದಲ್ಲಿ ಮಲಗಿದ್ದ ಸುಧೀರ್ ಅವರ ಮೇಲೆ ಆರೋಪಿತ ರತೀಶ್ ಬಿಸಿ ಕೆಮಿಕಲ್ ಎರಚಿ ಕೊಲೆಗೆ ಯತ್ನಿಸಿದ್ದ. ಪರಿಣಾಮ ಸುಧೀರ್ ಅವರ ಮುಖ, ಎದೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ರು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಂಚಾರಿ ಪೀಠ ಕಾರ್ಕಳ, ಎಸ್.ಸಿ. ನಂ.13/2022ರಲ್ಲಿ ಏಪ್ರಿಲ್ 28ರಂದು ತೀರ್ಪು ನೀಡಿ, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದೆ. ಆರೋಪಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿದ್ದಾನೆ.



