ಉಡುಪಿ : ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಹಾಗೂ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಓರ್ವ ರೌಡಿಶೀಟರ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಗಡಿಪಾರು ಆದೇಶ ಹೊರಡಿಸಿದ್ದಾರೆ. ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಮೊಹಮ್ಮದ್ ದಾನೀಶ್ ಮದನಿ (23), ಕಾವ್ರಾಡಿ ಗ್ರಾಮದ ಕಂಡ್ಲೂರು ನಿವಾಸಿ ಕರಾಣಿ ಮುಸೀನ್ (44) ಹಾಗೂ ಕಾಪು ತಾಲೂಕಿನ ಪಾದೂರು ಗ್ರಾಮದ ಚಂದ್ರನಗರ ನಿವಾಸಿ ಇಲಿಯಾಸ್ (36) ಗಡಿಪಾರು ಆದೇಶಕ್ಕೆ ಒಳಗಾದವರು.

ಮೊಹಮ್ಮದ್ ದಾನೀಶ್ ಮದನಿ ವಿರುದ್ಧ ಎಂಟು, ಕರಾಣಿ ಮುಸೀನ್ ವಿರುದ್ಧ ಏಳು ಹಾಗೂ ಇಲಿಯಾಸ್ ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದು, ಮೂವರ ವಿರುದ್ಧವೂ ಆಯಾ ಪೊಲೀಸ್ ಠಾಣೆಗಳಲ್ಲಿ ರೌಡಿ ಹಾಳೆ ತೆರೆಯಲಾಗಿದೆ. ಗಡಿಪಾರು ಕ್ರಮಕ್ಕೆ ಒಳಗಾದ ಬಳಿಕವೂ ಆರೋಪಿಗಳು ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಗೆ ಕಲ್ಲೆಸೆತ, ಕನ್ನ ಕಳವು, ಜಾನುವಾರು ಕಳವು, ಜಾನುವಾರು ಹತ್ಯೆ ಹಾಗೂ ರೌಡಿಸಂಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಒಟ್ಟು 30 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದೇಶದಂತೆ ಮೊಹಮ್ಮದ್ ದಾನೀಶ್ ಮದನಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ, ಕರಾಣಿ ಮುಸೀನ್ ಅವರನ್ನು ಬೀದರ್ ಜಿಲ್ಲೆಯ ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಗೆ ಹಾಗೂ ಇಲಿಯಾಸ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಅಕ್ರಮ ಚಟುವಟಿಕೆ ಹಾಗೂ ರೌಡಿಸಂ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಮೂವರ ವಿರುದ್ಧ ಪಿಐಟಿ-ಎನ್ಡಿಪಿಎಸ್ ಕಾಯ್ದೆಯಡಿ ಹಾಗೂ ನಾಲ್ವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಅಲ್ಲದೆ, 14 ಮಂದಿಯ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.


