ಉಡುಪಿ: ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಆರೋಹ 2026ರ ಸಮಾರೋಪ ಸಮಾರಂಭದಲ್ಲಿ ವಿಜೇತ ಕಾಲೇಜುಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸ್ಪರ್ಧೆಯಲ್ಲಿ ಶ್ರೀ ಮಂಜುನಾಥ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದು ರೂ40 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಡಾ. ಬಿ. ಬಿ. ಹೆಗ್ಡೆ ಕಾಲೇಜು ಪಡೆದು ರೂ30 ಸಾವಿರ ಬಹುಮಾನ ಪಡೆದರೆ, ತೃತೀಯ ಸ್ಥಾನವನ್ನು ಎಸ್ಎಂಎಸ್ ಕಾಲೇಜು ಪಡೆದು ರೂ20 ಸಾವಿರ ಬಹುಮಾನ ಗಳಿಸಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಸಾಂಘಿಕ ಪ್ರಯತ್ನವನ್ನು ಶ್ಲಾಘಿಸಿದರು. ಸ್ಥಳೀಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಜೆ ಮಾತನಾಡಿ, ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಈ ಸಾಂಸ್ಕೃತಿಕ ಸ್ಪರ್ಧೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಧಾರಾವಾಹಿ ನಟ ಪುನೀತ್ ಶೆಟ್ಟಿ ಮಾತನಾಡಿ, ತಾನು ವಿದ್ಯಾರ್ಥಿಯಾಗಿದ್ದಾಗ ಆರೋಹ ಕಾರ್ಯಕ್ರಮದ ಸಂಘಟನೆಯಲ್ಲಿ ಭಾಗವಹಿಸಿದ್ದ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಬದುಕಿನಲ್ಲಿ ಕನಸುಗಳನ್ನು ಕಾಣಬೇಕು ಹಾಗೂ ಅವುಗಳ ಬೆನ್ನತ್ತಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.

ಮಣೂರು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯ ಶುಭ ಹಾರೈಸಿದರು. ವಿದುಷಿ ದೀಕ್ಷಾ ವಿ., ನಿತಿನ್ ಶೆಟ್ಟಿ ಹಾಗೂ ಗೋಪಾಲ ಗಾಣಿಗ ತೀರ್ಪುಗಾರರಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಮೇಶ್ ಆಚಾರ್ ಉಪಸ್ಥಿತರಿದ್ದರು.



