ಉಡುಪಿ : ಜಿಲ್ಲೆಯ ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಂಆರ್ಪಿಎಲ್ ಹಾಗೂ ಕರ್ನಾಟಕ ಬ್ಯಾಂಕ್ ವತಿಯಿಂದ ಪ್ರಸಕ್ತ ಸಾಲಿನ ಸಿ.ಎಸ್.ಆರ್ ಅನುದಾನದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮೂರು ವಾಹನಗಳನ್ನು ಹಸ್ತಾಂತರಿಸಲಾಯಿತು. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರ ಸಮ್ಮುಖದಲ್ಲಿ ವಾಹನಗಳನ್ನು ಆರೋಗ್ಯ ಇಲಾಖೆಗೆ ಅಧಿಕೃತವಾಗಿ ಒಪ್ಪಿಸಲಾಯಿತು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಈ ವಾಹನಗಳು ನೆರವಾಗಲಿದ್ದು, ತುರ್ತು ಆರೋಗ್ಯ ಸೇವೆ, ಪರಿಶೀಲನಾ ಕಾರ್ಯ ಹಾಗೂ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮಹತ್ವದ ಸಹಕಾರಿಯಾಗಲಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು. ಈ ವೇಳೆ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಂಕ್ನ ಎ.ಜಿ.ಎಂ ರಮೇಶ್ ವೈದ್ಯ ಅವರನ್ನು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿ ಡಾ. ಶ್ರೀರಾಮ್ ರಾವ್ ಕೆ, ಡಿಪಿಡಿಓ ಡಾ. ಪ್ರಶಾಂತ್ ಭಟ್, ಜಿಲ್ಲಾ ಎನ್ಸಿಡಿ ಅಧಿಕಾರಿ ಡಾ. ಲತಾ ನಾಯಕ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಬ್ಯಾಂಕ್ನ ಪ್ರಮುಖರು ಉಪಸ್ಥಿತರಿದ್ದರು.



