Wednesday, May 13, 2026

spot_img

ಹಿಂದಿನ ಸರ್ಕಾರದ ವಿರುದ್ಧ ಸಚಿವ ಎಸ್. ಭೋಸರಾಜು ಆರೋಪ

ಉಡುಪಿ: ಬಜೆಟ್‌ನಲ್ಲಿ ಯಾವುದೇ ಹಣ ಮೀಸಲಿಡದೇ ಸಾವಿರಾರು ಕೋಟಿ ರೂ.ಗಳ ಸಣ್ಣ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದರಿಂದ ಇಲಾಖೆಯ ಬಾಕಿ ಸಾಲ ತೀರಿಸಲು ಈಗಿನ ಸರ್ಕಾರ ಪರದಾಡುವಂತಾಗಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್. ಭೋಸರಾಜು ಆರೋಪಿಸಿದರು.

ಬ್ರಹ್ಮಾವರ ತಾಲೂಕಿನ ಬೆಣ್ಣೆಕುದ್ರುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟಿನ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರವು ತನ್ನ ಆಡಳಿತದ ಕೊನೆಯ ದಿನವಾದ 2023ರ ಮಾರ್ಚ್ 20ರಂದು 12,696 ಕೋಟಿ ರೂ. ಮೌಲ್ಯದ ಸಣ್ಣ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿತ್ತು ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆಗೆ ಸಾಮಾನ್ಯವಾಗಿ ವಾರ್ಷಿಕ ಬಜೆಟ್‌ನಲ್ಲಿ 2,000 ರಿಂದ 3,000 ಕೋಟಿ ರೂ.ಗಳಷ್ಟೇ ಅನುದಾನ ದೊರೆಯುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಮಂಜೂರಾತಿ ನೀಡಿರುವುದು ಈಗಿನ ಸರ್ಕಾರಕ್ಕೆ ಆರ್ಥಿಕ ಒತ್ತಡ ತಂದಿದೆ. ಬಾಕಿ ಬಿಲ್‌ಗಳ ಪಾವತಿ ಹಾಗೂ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವಲ್ಲಿ ಸಮತೋಲನ ಸಾಧಿಸಲು ಸರ್ಕಾರ ಹರಸಾಹಸ ಪಡುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಹೆಚ್ಚುವರಿಯಾಗಿ ಸುಮಾರು 3,000 ಕೋಟಿ ರೂ.ಗಳನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್, ವಿಶ್ವ ಬ್ಯಾಂಕ್ ಮತ್ತು ನಬಾರ್ಡ್‌ಗಳಂತಹ ಆರ್ಥಿಕ ಸಂಸ್ಥೆಗಳಿಂದ ಪಡೆಯಲು ಪ್ರಯತ್ನಿಸುತ್ತಿದ್ದು, ರಾಜ್ಯಾದ್ಯಂತ ಸಣ್ಣ ನೀರಾವರಿ ಯೋಜನೆಗಳಿಗೆ ಹಣಕಾಸು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪಶ್ಚಿಮ ವಾಹಿನಿ ಯೋಜನೆ ಹಾಗೂ ಸಮುದ್ರ ತಡೆಗೋಡೆ ಕಾಮಗಾರಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹಿಂದಿನ ಸರ್ಕಾರ ಆರಂಭಿಸಿದ್ದ ಕೆಲವು ಯೋಜನೆಗಳು ಜನೋಪಯೋಗಿಯಾಗಿದ್ದರೂ, ಇನ್ನೂ ಕೆಲವು ಯೋಜನೆಗಳನ್ನು ಸಮಗ್ರ ಪರಿಶೀಲನೆ ಇಲ್ಲದೆ ವೈಯಕ್ತಿಕ ಹಿತಾಸಕ್ತಿಗಾಗಿ ಅನುಷ್ಠಾನಗೊಳಿಸಲಾಗಿದೆ. ಕೆಲವೆಡೆ ಖಾಸಗಿ ಮನೆಗಳ ಬಳಿ ತಡೆಗೋಡೆ ನಿರ್ಮಿಸಲು ಒಂದು ರಿಂದ ಮೂರು ಕೋಟಿ ರೂ.ವರೆಗೆ ವೆಚ್ಚ ಮಾಡಲಾಗಿದೆ. ಸಾರ್ವಜನಿಕ ಹಣವನ್ನು ವೈಯಕ್ತಿಕ ಆಸ್ತಿ ರಕ್ಷಣೆಗೆ ಬಳಸುವುದು ಸರಿಯಲ್ಲ ಎಂದು ಅವರು ಟೀಕಿಸಿದರು.

ಪಶ್ಚಿಮ ಘಟ್ಟ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಉಪ್ಪುನೀರು ಹಾಗೂ ಕರಾವಳಿ ಕೊರೆತ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಯೋಜನೆಗಳಿಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಶೀಲನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಪಶ್ಚಿಮವಾಹಿನಿ ಯೋಜನೆಗೆ ತಡೆ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನೋಪಯೋಗಿ ಯೋಜನೆಗಳನ್ನು ಮುಂದುವರಿಸಲಾಗುವುದು. ಆದರೆ ಯೋಜನೆಯ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ 3,200 ಕೋಟಿ ರೂ.ಗಳ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪಶ್ಚಿಮ ಘಟ್ಟ ಮತ್ತು ಕರಾವಳಿ ಭಾಗದ ನೀರಾವರಿ ಹಾಗೂ ತಡೆಗೋಡೆ ಕಾಮಗಾರಿಗಳಿಗೆ ನೆರವು ಕೋರಲಾಗಿದ್ದರೂ, ಕೇಂದ್ರದಿಂದ ಇನ್ನೂ ಸ್ಪಂದನೆ ಬಂದಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡ ಉದಯಶೆಟ್ಟಿ ಮುನಿಯಾಲು ಹಾಗೂ ದಿನೇಶ್ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles