ಉಡುಪಿ : ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿರುವ ಬೆಳವಣಿಗೆ ದುರದೃಷ್ಟಕರವಾಗಿದ್ದು, ಇದು ಹಿಂದುಳಿದ ವರ್ಗಗಳ ಜನರಲ್ಲಿ ಬೇಸರ ಮತ್ತು ನೋವು ಉಂಟು ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ವಿಚಾರಧಾರೆಗಳು ಮತ್ತು ರಾಜಕೀಯ ನಿಲುವುಗಳ ಬಗ್ಗೆ ತಮ್ಮೊಂದಿಗೆ ಸಾವಿರಾರು ಭಿನ್ನಾಭಿಪ್ರಾಯಗಳಿದ್ದರೂ, ಹಿಂದುಳಿದ ವರ್ಗಗಳು ಹಾಗೂ ದಲಿತರ ಪರವಾಗಿ ದೃಢ ಧ್ವನಿಯಲ್ಲಿ ಮಾತನಾಡುತ್ತಿದ್ದ ನಾಯಕರಾಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಸರಿ-ತಪ್ಪು ಸೇರಿದಂತೆ ಅನೇಕ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ಇಂತಹ ಅನುಭವಿ ರಾಜಕಾರಣಿಯನ್ನು ಏಕಾಏಕಿ ಅಧಿಕಾರದಿಂದ ಕೆಳಗಿಳಿಸಿರುವುದು ದುರದೃಷ್ಟಕರ ಬೆಳವಣಿಗೆ. ಇದು ಹಿಂದುಳಿದ ವರ್ಗದ ಜನರಿಗೆ ನೋವುಂಟು ಮಾಡಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರನ್ನು ನಂಬಿ ಕಾಂಗ್ರೆಸ್ ಬೆಂಬಲಿಸಿದ್ದ ದೊಡ್ಡ ವರ್ಗವೊಂದು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದು, ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಅನ್ನು ಆ ವರ್ಗ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ರಾಜಕೀಯ ಜೀವನದ ಕೊನೆಯ ಹಂತದಲ್ಲಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನೀಡಿರುವ ಈ ನಡೆ ನೋವುಂಟು ಮಾಡುವಂತದ್ದು. ಪಕ್ಷಕ್ಕಾಗಿ ದುಡಿದ ನಾಯಕನಿಗೆ ಈ ರೀತಿಯ ಪರಿಸ್ಥಿತಿ ಎದುರಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.

ರಾಜ್ಯದ ಆಡಳಿತ ಕುರಿತು ಪ್ರತಿಕ್ರಿಯಿಸಿದ ಸಂಸದರು, ಯಾವುದೇ ಸರ್ಕಾರ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣಬೇಕು. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮುಂದೆ ಬರಲಿರುವ ಸರ್ಕಾರದ ಬಗ್ಗೆ ಜನರಲ್ಲಿ ನಿರೀಕ್ಷೆ ಇದ್ದರೂ, ಸಂಪೂರ್ಣ ವಿಶ್ವಾಸ ಮೂಡಿದಂತೆ ಕಾಣುತ್ತಿಲ್ಲ. ಹೊಸ ಸರ್ಕಾರ ಜನರ ನಂಬಿಕೆಯನ್ನು ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.



