ಉಡುಪಿ: ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸಿ ಸಮಾನತೆಯ ದೃಢ ಸಂಕಲ್ಪವನ್ನು ತೊಟ್ಟಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, ದೌರ್ಜನ್ಯ ಮತ್ತು ತಾರತಮ್ಯದಿಂದ ನೊಂದವರ ಧ್ವನಿಯಾಗಿ ಜನರಲ್ಲಿ ಹೊಸ ಚಿಂತನೆಯನ್ನು ಮೂಡಿಸಿದರು. ಜ್ಞಾನಸಾಗರ ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಬದುಕಿನ ಹಾದಿ ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ವಕೀಲ ಮಂಜುನಾಥ್ ಗಿಳಿಯಾರು ಹೇಳಿದರು.

ಅವರು ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಮಹಿಳೆಯರ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ಅವರು, ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಗೌರವ ದೊರೆಯುವುದರ ಜತೆಗೆ ಅವರ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಿದರು. ಇದರ ಪರಿಣಾಮವಾಗಿ ಇಂದು ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಮಾತನಾಡಿ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ದೇಶದ ಅಭಿವೃದ್ಧಿ ಮತ್ತು ಸ್ವಾತಂತ್ರ್ಯಕ್ಕಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಇಂದಿನ ಯುವಪೀಳಿಗೆ ಅವರ ಸಿದ್ಧಾಂತ ಹಾಗೂ ಮಾರ್ಗದರ್ಶನವನ್ನು ಅನುಸರಿಸಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ. ಹಾಗೂ ಐಕ್ಯೂಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ. ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಪಂಜು ನಿರೂಪಿಸಿದರು. ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಮೀನಾಕ್ಷಿ ನಾಯ್ಕ್ ವಂದಿಸಿದರು.


