ಉಡುಪಿ : ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಕುರಿತು ಸತ್ಯಾಸತ್ಯತೆ ಶೀಘ್ರವೇ ಹೊರಬರಬೇಕು. ಆರೋಪ ಸಾಬೀತಾದರೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಆಧಾರದ ಮೇಲೆ ಈಗಲೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಜುಲೈ 11ರಂದು ರಾಮಮಂದಿರ ಟ್ರಸ್ಟ್ ಸಭೆ ನಡೆಯಲಿದ್ದು, ನಾನು ಕೂಡ ಸಭೆಯಲ್ಲಿ ಭಾಗವಹಿಸುತ್ತೇನೆ. ಅಲ್ಲಿ ವಿಚಾರ ಚರ್ಚೆಯಾದ ಬಳಿಕ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಸಿಂಧಿ ಸಮುದಾಯ 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಸೂಕ್ತ ಮಾನ್ಯತೆ ದೊರೆತಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ದೊಡ್ಡ ಮೊತ್ತದ ದೇಣಿಗೆ ನೀಡುವವರು ಸ್ಥಳದಲ್ಲೇ ರಶೀದಿ ಪಡೆಯಬೇಕು. ದೇಣಿಗೆ ಸ್ವೀಕರಿಸುವವರಿಗೂ ರಶೀದಿ ನೀಡುವ ಜವಾಬ್ದಾರಿ ಇದೆ. ರಶೀದಿ ನೀಡದಿರುವುದು ದೊಡ್ಡ ತಪ್ಪು. ಕೇವಲ ಬಾಯಿಮಾತಿನ ಆರೋಪಗಳು ಉಳಿಯಬಾರದು. ಆರೋಪದಲ್ಲಿ ವಾಸ್ತವಾಂಶ ಇರಬಹುದು. ಆದರೆ ರಶೀದಿ ನೀಡಿಲ್ಲ ಎಂಬುದನ್ನು ನಂಬುವುದು ಕಷ್ಟ ಎಂದರು.

ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ ಶ್ರೀಗಳು, ದೇಶ-ವಿದೇಶದ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ರಾಮಮಂದಿರದಲ್ಲಿ ಇಂತಹ ಘಟನೆಗಳು ನಡೆದಿರಬಾರದು. ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸತ್ಯ ಹೊರಬರಬೇಕು ಎಂದು ಹೇಳಿದರು. ತಾವು ಟ್ರಸ್ಟ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಹಲವು ಬಾರಿ ಆಡಳಿತಾತ್ಮಕ ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ಅವರು, ನಾನು ಸಭೆಗಳಲ್ಲಿ ಹಲವು ಸಲಹೆಗಳನ್ನು ನೀಡುತ್ತಿದ್ದೆ. ಅಧಿಕಾರಿಗಳು ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದರು. ವಿಶ್ವಾಸದ ಮೇಲೆ ಸಲಹೆ ನೀಡುತ್ತಿದ್ದೆ ಎಂದರು.

ರಾಮಮಂದಿರಕ್ಕೆ ದೇಣಿಗೆ ನೀಡುವ ಬದಲು ಬಡವರಿಗೆ ಮನೆ ನಿರ್ಮಿಸಿಕೊಡುವಂತೆ ಈ ಹಿಂದೆಯೇ ಕರೆ ನೀಡಿದ್ದೆ ಎಂದು ತಿಳಿಸಿದ ಶ್ರೀಗಳು, ಬಡವರಿಗೆ ಮನೆ ನಿರ್ಮಿಸಿಕೊಡುವುದೂ ರಾಮಸೇವೆಯೇ ಆಗಿದೆ. ಅವಕಾಶ ವಂಚಿತರು, ದೀನದಲಿತರಿಗೆ ನೆರವಾಗುವ ಮೂಲಕ ದೇವರ ಸೇವೆ ಮಾಡಬಹುದು” ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಎಸ್ಐಟಿ ತನಿಖೆಯ ಮೇಲೆ ವಿಶ್ವಾಸವಿದ್ದು, ಸಮಗ್ರ ತನಿಖೆ ನಡೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು. ಆರ್ಎಸ್ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಘಟನೆಯನ್ನು ನೋಂದಾಯಿಸಿದರೆ ಅನಗತ್ಯ ಆರೋಪಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.


