Friday, July 10, 2026

spot_img

ಶಾಲಾ ಬಸ್ ಪಲ್ಟಿ: ನಿರ್ಲಕ್ಷ್ಯದ ಆರೋಪದ ನಡುವೆ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

ಉಡುಪಿ : ಮಣಿಪಾಲ ಸಮೀಪ ಖಾಸಗಿ ಶಾಲೆಯ ಬಸ್ ಪಲ್ಟಿಯಾದ ಘಟನೆಗೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದೆ.

ಮಣಿಪಾಲದ ಕ್ರಿಸ್ಟ್ ಶಾಲೆಗೆ ಸೇರಿದ ಬಸ್ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕರೆತರಲು ತೆರಳಿದ್ದ ವೇಳೆ ಅಪಘಾತಕ್ಕೀಡಾಗಿದೆ. ಇಬ್ಬರು ಮಕ್ಕಳನ್ನು ಕರೆತರಲು ತೆರಳಿದ್ದ ಬಸ್‌ನಲ್ಲಿ ಸುಮಾರು 25 ಮಕ್ಕಳು ಪ್ರಯಾಣಿಸುತ್ತಿದ್ದರು. ತಗ್ಗು ಪ್ರದೇಶದಲ್ಲಿ ಬಸ್‌ನ್ನು ರಿವರ್ಸ್ ತೆಗೆದು ತಿರುವು ಪಡೆಯುವ ಸಂದರ್ಭದಲ್ಲಿ ಕೆಸರಿನಿಂದ ಕೂಡಿದ್ದ ರಸ್ತೆಯಲ್ಲಿ ಹಿಂಬದಿ ಟೈರ್ ಜಾರಿದ ಪರಿಣಾಮ ಬಸ್ ಕಂದಕಕ್ಕೆ ಉರುಳಿದೆ.

ಅಪಘಾತದಲ್ಲಿ ಗಾಯಗೊಂಡ ಏಳು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ನೈಶಾ ಶೆಟ್ಟಿ (13) ಗಂಭೀರವಾಗಿ ಗಾಯಗೊಂಡಿದ್ದಾಳೆ. ತಲೆಗೆ ಗಾಯವಾಗಿದ್ದು, ವೈದ್ಯರು ಎಂಟು ಹೊಲಿಗೆ ಹಾಕಿದ್ದು, ಆಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ವಿದ್ಯಾರ್ಥಿಗಳನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ.

ಘಟನೆಯ ಬಳಿಕ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಸ್‌ನ ನಾಲ್ಕೂ ಟೈರ್‌ಗಳು ಹಾಳಾಗಿದ್ದವು, ಬ್ರೇಕ್ ವ್ಯವಸ್ಥೆಯಲ್ಲಿಯೂ ದೋಷವಿದ್ದರೂ ವಾಹನವನ್ನು ಶಾಲಾ ಸೇವೆಗೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಬಸ್‌ನ ಸ್ಥಿತಿಗತಿ ಬಗ್ಗೆ ಚಾಲಕ ಮುಂಚಿತವಾಗಿಯೇ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಇನ್ನೂ 14 ಆಸನ ಸಾಮರ್ಥ್ಯ ಹೊಂದಿದ್ದ ಬಸ್‌ನಲ್ಲಿ ಸುಮಾರು 25 ಮಕ್ಕಳನ್ನು ಕೂರಿಸಿ ಸಾಗಿಸಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ವಾಹನ ಸುರಕ್ಷಿತ ಸ್ಥಿತಿಯಲ್ಲಿರದಿದ್ದರೂ ಅತಿವೇಗದಲ್ಲಿ ಚಲಾಯಿಸಲಾಗಿದೆ ಎಂದು ಪೋಷಕರು ದೂರಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರು ಖಾಸಗಿ ಶಾಲಾ ವಾಹನಗಳು ಅಪಘಾತಕ್ಕೀಡಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಶಾಲಾ ವಾಹನಗಳ ಫಿಟ್ನೆಸ್ ಮತ್ತು ಸುರಕ್ಷತಾ ಮಾನದಂಡಗಳ ಕುರಿತು ಸಾರಿಗೆ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳು ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles