Sunday, August 2, 2026

spot_img

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ: ಎಂ.ಎ. ಗಫೂರ್

ಉಡುಪಿ : ವ್ಯಸನಗಳಿಂದ ದೂರವಿದ್ದು ಸನ್ಮಾರ್ಗದಲ್ಲಿ ಸಾಗುವ ಮೂಲಕ ಯುವಜನತೆ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಕರೆ ನೀಡಿದರು.

ನಗರದ ನೇತ್ರಜ್ಯೋತಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ನೇತ್ರಜ್ಯೋತಿ ಕಾಲೇಜು, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿ ಸ್ವಾಮೀಜಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ವ್ಯಸನಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಧು-ಸಂತರು ತಮ್ಮ ಜೀವನಾನುಭವ ಹಾಗೂ ಸಾಹಿತ್ಯದ ಮೂಲಕ ಸಮಾಜಕ್ಕೆ ಸನ್ಮಾರ್ಗದ ದಾರಿ ತೋರಿಸಿದ್ದಾರೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಡಾ. ಮಹಾಂತ ಶಿವಯೋಗಿ ಸ್ವಾಮೀಜಿಗಳು ನಡೆಸಿದ ಜಾಗೃತಿ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ. ಯುವಜನತೆ ಅವರ ಆದರ್ಶಗಳನ್ನು ಅನುಸರಿಸಿ ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.

ಜಿಲ್ಲಾ ಸರ್ಜನ್ ಡಾ. ಅಶೋಕ್ ಮಾತನಾಡಿ, ರಾಜ್ಯ ಸರ್ಕಾರ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿದ್ದು, ಸ್ವಾಮೀಜಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನವಾಗಿ ಆಚರಿಸುತ್ತಿರುವುದೇ ಅದರ ಸಾಕ್ಷಿಯಾಗಿದೆ. ಉಭಯ ಜಿಲ್ಲೆಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಇದನ್ನು ತಡೆಗಟ್ಟಲು ನಿರಂತರ ಜಾಗೃತಿ ಕಾರ್ಯಕ್ರಮಗಳು ಅಗತ್ಯವೆಂದರು.ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ವಿಶೇಷ ಉಪನ್ಯಾಸ ನೀಡಿ, ಶಿವಯೋಗಿ ಸ್ವಾಮೀಜಿಗಳು ಕುಡಿತ ಹಾಗೂ ಇತರೆ ದುಶ್ಚಟಗಳ ವಿರುದ್ಧ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಿದ ಮಹತ್ತರ ಸೇವೆಯನ್ನು ಸ್ಮರಿಸಿದರು. ಬೀಡಿ, ಸಿಗರೇಟ್‌, ಮದ್ಯ, ಗಾಂಜಾ ಹಾಗೂ ಡ್ರಗ್ಸ್‌ ಸೇರಿದಂತೆ ಎಲ್ಲ ಮಾದಕ ವಸ್ತುಗಳು ಯುವಜನತೆಯ ಭವಿಷ್ಯವನ್ನು ಹಾಳು ಮಾಡುತ್ತವೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೇತ್ರಜ್ಯೋತಿ ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೌರಿ ಪ್ರಭು ಮಾತನಾಡಿ, ಹದಿಹರೆಯದ ವಿದ್ಯಾರ್ಥಿಗಳು ಸ್ನೇಹಿತರ ಒತ್ತಡ ಅಥವಾ ಕುತೂಹಲದಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಮಹಾಂತ ಶಿವಯೋಗಿ ಸ್ವಾಮೀಜಿಗಳು 1975ರಿಂದ ‘ಮಹಾಂತ ಜೋಳಿಗೆ’ ಕಾರ್ಯಕ್ರಮದ ಮೂಲಕ ಸಾವಿರಾರು ಕುಟುಂಬಗಳನ್ನು ವ್ಯಸನಮುಕ್ತಗೊಳಿಸಿದ ಸಮಾಜ ಸುಧಾರಕರಾಗಿದ್ದರು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕಿ ಅಶ್ವಿನಿ ಅವರು ಮಾದಕ ವಸ್ತು ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಧ್ವ ವಲ್ಲಭ ಆಚಾರ್ಯ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಚೀಫ್ ಕೋ-ಆರ್ಡಿನೇಟರ್ ಮಾಧವ ಪೂಜಾರಿ ನಿರೂಪಿಸಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles