ಉಡುಪಿ : ವಯಸ್ಸು ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ. ಹಿರಿಯ ನಾಗರಿಕರು ಯಾವುದೇ ಹಿಂಜರಿಕೆಯಿಲ್ಲದೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಹಿರಿಯರ ಮನೋಚೈತನ್ಯ ಹೆಚ್ಚುವುದರ ಜತೆಗೆ ಕಾರ್ಯಕ್ರಮಗಳೂ ಯಶಸ್ವಿಯಾಗುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನಿತಿನ್ ಯಶ್ವಂತ್ ರಾವ್ ಹೇಳಿದರು. ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ. 28ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಬಕೆಟ್ಗೆ ಚೆಂಡು ಎಸೆಯುವ ಮೂಲಕ ಹಾಗೂ ಬಿರುಸಿನ ನಡಿಗೆಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯುವಜನರು ಹಿರಿಯರನ್ನು ಪ್ರೀತಿ, ಗೌರವ ಹಾಗೂ ಕಾಳಜಿಯಿಂದ ನೋಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳು ತಮ್ಮ ತಂದೆ-ತಾಯಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಬದಲು ಕುಟುಂಬದಲ್ಲಿಯೇ ಗೌರವದಿಂದ ಬದುಕಲು ಅವಕಾಶ ಕಲ್ಪಿಸಬೇಕು. ಅವರ ಜೀವನದ ಸಂಧ್ಯಾಕಾಲದಲ್ಲಿ ಜೊತೆಯಾಗಿ ನಿಂತು, ಅವರ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಹಿರಿಯ ನಾಗರಿಕರು ವಯಸ್ಸಿನ ಬಗ್ಗೆ ಚಿಂತಿಸದೆ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮನೋಚೈತನ್ಯ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಶಾಲಾ ದಿನಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿದಂತೆ ಈಗಲೂ ಯಾವುದೇ ಅಂಜಿಕೆ ಇಲ್ಲದೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಅಕ್ಟೋಬರ್ 1ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯರಿಗಾಗಿ ಒಂದು ದಿನದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ರೀಡೆ ದೈಹಿಕ ಆರೋಗ್ಯದ ಜತೆಗೆ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಬಾಲ್ಯದಲ್ಲಿ ಆಡಿದ ಆಟಗಳನ್ನು ಮತ್ತೆ ನೆನಪಿಸಿಕೊಳ್ಳಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ಹಿರಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸದಾನಂದ ಹೆಗಡೆ, ಗೌರವಾಧ್ಯಕ್ಷ ಎಚ್. ವಿಶ್ವನಾಥ್ ಹೆಗ್ಡೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ. ನಿರಂಜನ ಭಟ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಾಸಂತಿ ರಾವ್ ಕೊರಡ್ಕಲ್, ಬಳಕೆದಾರರ ವೇದಿಕೆಯ ಅಧ್ಯಕ್ಷ ಹರಿಕೃಷ್ಣ ಶಿವತ್ತಾಯ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮುರುಳೀಧರ್ ಸೇರಿದಂತೆ ವಿವಿಧ ತಾಲೂಕುಗಳ ಹಿರಿಯ ನಾಗರಿಕರ ವೇದಿಕೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯರಿಗಾಗಿ ಬಿರುಸಿನ ನಡಿಗೆ, ಬಕೆಟ್ಗೆ ಚೆಂಡು ಎಸೆಯುವುದು, ಪುರುಷರಿಗೆ ಕೇರಂ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ವಿಭಾಗದಲ್ಲಿ ಗಾಯನ ಮತ್ತು ಏಕಪಾತ್ರಾಭಿನಯ ಸ್ಪರ್ಧೆಗಳು ನಡೆದವು. ಹಿರಿಯ ನಾಗರಿಕರು ವಯಸ್ಸಿನ ಹಂಗು ತೊರೆದು ತಮಗಿಷ್ಟವಾದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬ್ರಹ್ಮಕುಮಾರಿ ಡಿ.ಕೆ. ಸುಮಾ ಅವರಿಂದ ಮಾರ್ಗದರ್ಶಿ ಧ್ಯಾನ ಹಾಗೂ ಗಾಯಕ ಡಾ. ಸಚಿನ್ ಸಾಲ್ಯಾನ್ ಅವರಿಂದ ಸಂಗೀತ ಚಿಕಿತ್ಸಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿದರು. ರೆಡ್ಕ್ರಾಸ್ ಗೌರವ ಕಾರ್ಯದರ್ಶಿ ಗಣನಾಥ್ ಎಕ್ಕಾರು ಹಾಗೂ ವಿಶೇಷ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್. ರವೀಂದ್ರ ನಿರೂಪಿಸಿದರು. ಇಲಾಖೆಯ ಯೋಜನಾ ಸಹಾಯಕ ಶಿವಾಜಿ ಎ.ಕೆ. ವಂದಿಸಿದರು.


