ಉಡುಪಿ : ಭಾರತೀಯ ಸಂಸ್ಕೃತಿ, ಪುರಾಣ, ಧಾರ್ಮಿಕ ಪರಂಪರೆ ಹಾಗೂ ಶಿಲ್ಪಕಲೆಯ ಇತಿಹಾಸದಲ್ಲಿ ವಿಶ್ವಕರ್ಮರಿಗೆ ವಿಶಿಷ್ಟ ಸ್ಥಾನವಿದೆ. ತಂತ್ರಜ್ಞಾನದ ಅರಿವು ಇಲ್ಲದ ಸಾವಿರಾರು ವರ್ಷಗಳ ಹಿಂದೆಯೇ ತಮ್ಮ ಕೈಚಳಕದ ಮೂಲಕ ಅದ್ಭುತ ವಾಸ್ತುಶಿಲ್ಪಗಳನ್ನು ನಿರ್ಮಿಸಿದ ದೇವಶಿಲ್ಪಿ ವಿಶ್ವಕರ್ಮರನ್ನು ವಿಶ್ವದ ಸೃಷ್ಟಿಕರ್ತ ಎಂದು ಗುರುತಿಸಲಾಗಿದೆ ಎಂದು ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.

ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪಿ.ಎಂ. ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದ್ದು, ದೇಶದ ಪಾರಂಪರಿಕ ಕುಲಕಸುಬುಗಳಿಗೆ ಬಲ ತುಂಬುವಲ್ಲಿ ಇದು ಸಹಕಾರಿಯಾಗಿದೆ. ಯೋಜನೆಯ ಪ್ರಯೋಜನ ಪಡೆದುಕೊಂಡು ಸಮುದಾಯದ ಅನೇಕರು ತಮ್ಮ ವೃತ್ತಿಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದರು.

ಉಡುಪಿ ಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಕಾಪು ಮಾರಿಗುಡಿ, ಪಡುಬಿದ್ರಿ, ಕಡಿಯಾಳಿ ಸೇರಿದಂತೆ ವಿವಿಧ ದೇವಾಲಯಗಳ ನಿರ್ಮಾಣ ಹಾಗೂ ಪುನರ್ರೂಪಿಸುವ ಕಾರ್ಯದಲ್ಲಿಯೂ ವಿಶ್ವಕರ್ಮ ಸಮುದಾಯದವರ ಕೊಡುಗೆ ಮಹತ್ವದ್ದಾಗಿದೆ. ವಿಶ್ವಕರ್ಮ ಜಯಂತಿಯ ಮೂಲಕ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಜತೆಗೆ, ಅವರ ಪರಂಪರಾಗತ ಜ್ಞಾನ ಮತ್ತು ಕೌಶಲ್ಯವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಪ್ರಪಂಚದ ನಿರ್ಮಾಣದಲ್ಲಿ ಶಿಲ್ಪಿಗಳ ಪಾತ್ರ ಮಹತ್ವದ್ದಾಗಿದೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅನಾದಿ ಕಾಲದಿಂದಲೇ ದೇವದತ್ತ ಕೌಶಲ್ಯದ ಮೂಲಕ ವಾಸ್ತುಶಿಲ್ಪ ರಚಿಸುವ ಪರಂಪರೆಯನ್ನು ವಿಶ್ವಕರ್ಮ ಸಮುದಾಯದವರು ಬೆಳೆಸಿಕೊಂಡು ಬಂದಿದ್ದಾರೆ ಎಂದರು. ಜಾತಿ, ಮತ, ಧರ್ಮದ ಭೇದವಿಲ್ಲದೆ ಮಠ, ಮಂದಿರ, ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳ ನಿರ್ಮಾಣದಲ್ಲಿಯೂ ವಿಶ್ವಕರ್ಮ ಸಮುದಾಯದವರ ಕೊಡುಗೆ ಇದೆ. ಸಮುದಾಯ ಸಂಘಟಿತರಾಗಿ ಮುನ್ನಡೆಯುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ತಮ್ಮ ಪಾತ್ರವನ್ನು ಮತ್ತಷ್ಟು ವಿಸ್ತರಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಪ್ರಪಂಚದ ಉದ್ಭವದ ಕಾಲದಿಂದಲೂ ವಿಶ್ವಕರ್ಮರ ಸೇವೆ ಸಮಾಜಕ್ಕೆ ಸಲ್ಲುತ್ತ ಬಂದಿದೆ. ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸಮುದಾಯದವರು ತಮ್ಮ ಪರಂಪರೆಯನ್ನು ಮುಂದುವರಿಸಬೇಕು ಎಂದರು. ಪಡುಕುತ್ಯಾರು ಆನೆಗುಂದಿ ಮಠದ ಲೋಲಾಕ್ಷ ಶರ್ಮ ಅವರು ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿ, ದೇವಶಿಲ್ಪಿ ವಿಶ್ವಕರ್ಮರು ವಿಶ್ವಕರ್ಮ ಸಮುದಾಯದ ಆರಾಧ್ಯ ದೈವವಾಗಿದ್ದಾರೆ. ಪುರಾಣಗಳಲ್ಲಿ ವಿಶ್ವದ ಸೃಷ್ಟಿಯ ಕುರಿತ ವಿಚಾರಗಳನ್ನು ಅರಿಯಲು ವಿಶ್ವಕರ್ಮರ ಅಧ್ಯಯನ ಅಗತ್ಯ ಎಂಬ ಉಲ್ಲೇಖಗಳಿವೆ ಎಂದರು.

ಮನೆ ನಿರ್ಮಾಣದಿಂದ ಕೃಷಿಗೆ ಸಂಬಂಧಿಸಿದ ವಿವಿಧ ಪರಿಕರಗಳ ತಯಾರಿಕೆಯವರೆಗೆ ವಿಶ್ವಕರ್ಮ ಸಮುದಾಯದವರು ಸಮಾಜದ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಸಮುದಾಯದ ಯುವಜನರು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ವೃತ್ತಿ ಹಾಗೂ ಪರಂಪರೆಯನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಸಾಧನೆಗೈದ ವಿಶ್ವಕರ್ಮ ಸಮಾಜದ ಐದು ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು, ಸಮಾಜ ಬಾಂಧವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


