ಉಡುಪಿ: ನಗರದ ಪ್ರಸಿದ್ಧ ವಿಟ್ಲ ಪಿಂಡಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಮಹೋತ್ಸವದ ಭದ್ರತೆಗಾಗಿ ಒಬ್ಬ ಪೊಲೀಸ್ ಅಧೀಕ್ಷಕ, ಒಬ್ಬ ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಇಬ್ಬರು ಡಿವೈಎಸ್ಪಿಗಳು, ಆರು ಪೊಲೀಸ್ ಇನ್ಸ್ಪೆಕ್ಟರ್ಗಳು, 25 ಪಿಎಸ್ಐಗಳು, 35 ಎಎಸ್ಐಗಳು ಸೇರಿದಂತೆ 186 ಮಂದಿ ಹೆಡ್ ಕಾನ್ಸ್ಟೆಬಲ್, ಪೊಲೀಸ್ ಕಾನ್ಸ್ಟೆಬಲ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 50 ಗೃಹರಕ್ಷಕ ದಳದ ಸಿಬ್ಬಂದಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ. ಹೆಚ್ಚುವರಿ ಭದ್ರತೆಗಾಗಿ ಒಂದು ಕೆಎಸ್ಆರ್ಪಿ ತುಕಡಿ, ಒಂಬತ್ತು ಡಿಎಆರ್ ತುಕಡಿಗಳು, ಮೂರು ಅಗ್ನಿಶಾಮಕ ದಳದ ತಂಡಗಳು, ಎರಡು ಆಂಬ್ಯುಲೆನ್ಸ್ಗಳು ಹಾಗೂ ಮೂರು ಡ್ರೋನ್ ತಂಡಗಳನ್ನು ನಿಯೋಜಿಸಲಾಗಿದೆ.

ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳ ಸುಗಮ ಪಾರ್ಕಿಂಗ್ಗಾಗಿ ಎಂ.ಜಿ.ಎಂ. ಮೈದಾನ, ಶ್ರೀಕೃಷ್ಣ ಮಠ ರಾಜಾಂಗಣ ಪಾರ್ಕಿಂಗ್ ಸ್ಥಳ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ ಪಾರ್ಕಿಂಗ್ ಸ್ಥಳ, ಬೀಡಿನಗುಡ್ಡೆ ಮೈದಾನ, ಬೀಡಿನಗುಡ್ಡೆ ಕ್ರೀಡಾಂಗಣ, ವಿದ್ಯೋದಯ ಶಾಲೆ ಪಾರ್ಕಿಂಗ್ ಸ್ಥಳ ಹಾಗೂ ಮಾಂಡವಿ ರಾಯಲ್ ಗಾರ್ಡನ್ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.

ಜನಸಂದಣಿ ನಿಯಂತ್ರಣದ ಜತೆಗೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಅಕ್ಕಪಡೆ ಸಿಬ್ಬಂದಿ ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 45 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ನಡೆಸಲಾಗುತ್ತಿದೆ. 12 ಸಾರ್ವಜನಿಕ ಘೋಷಣಾ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ. ಹಿಂದಿನ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಿ ನಿಗಾ ವಹಿಸಲು ಫಿಂಗರ್ಪ್ರಿಂಟ್ ಸ್ಕ್ಯಾನರ್ಗಳನ್ನು ಬಳಸಲಾಗುತ್ತಿದೆ. ಕಾರ್ಯಕ್ರಮ ನಡೆಯುವ ಪ್ರದೇಶದ ಮೇಲೆ ಮೂರು ಡ್ರೋನ್ ತಂಡಗಳ ಮೂಲಕ ನಿರಂತರ ನಿಗಾ ಇರಿಸಲಾಗುತ್ತದೆ.

ಮಹೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಹಾಗೂ ಪೊಲೀಸರು ನೀಡುವ ಸೂಚನೆಗಳನ್ನು ಅನುಸರಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.


