ಉಡುಪಿ : ವಿಕಲಚೇತನ ಮಕ್ಕಳ ಬೆಳವಣಿಗೆ, ಮನರಂಜನೆ ಹಾಗೂ ಸಾಮರ್ಥ್ಯ ವೃದ್ಧಿಗೆ ಪೂರಕವಾಗುವ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿ ನಗರದ ಬಾಲಭವನ ದಲ್ಲಿ ವಿಶೇಷ ಮಕ್ಕಳಿಗಾಗಿ ಸಾಮರ್ಥ್ಯ ವನ ಪಾರ್ಕ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಪಾರ್ಕ್ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶಿಲಾನ್ಯಾಸ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಬಲ್ಲ ಯೋಜನೆ. ನಾಲ್ಕು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆ ಇದ್ದರೂ, ಎರಡೇ ವರ್ಷದಲ್ಲಿ ಪೂರ್ಣಗೊಳಿಸಿ ನಮ್ಮ ಅವಧಿಯಲ್ಲೇ ಉದ್ಘಾಟನೆ ಮಾಡುವ ಗುರಿ ಹೊಂದಬೇಕು. ನಮ್ಮ ಇಲಾಖೆಯಿಂದ ಅಗತ್ಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಕಲಚೇತನರಿಗೆ ಸಮಗ್ರ ಪುನರ್ವಸತಿ, ಚಿಕಿತ್ಸಕ ಸೇವೆಗಳು, ಉದ್ಯೋಗಾವಕಾಶ ಹಾಗೂ ಸ್ವತಂತ್ರ ಜೀವನ ನಡೆಸಲು ಅಗತ್ಯ ಸಾಮರ್ಥ್ಯ ವೃದ್ಧಿಸುವ ಉದ್ದೇಶದಿಂದ ವಿಶಿಷ್ಟ ವಿನ್ಯಾಸದ ಪಾರ್ಕ್ ನಿರ್ಮಿಸಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಸಿಇಒ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಾಮರ್ಥ್ಯ ಟ್ರಸ್ಟ್ ರಚಿಸಲಾಗಿದೆ. ಒಂದೂವರೆ ಕೋಟಿ ರೂ. ಸರ್ಕಾರಿ ಅನುದಾನ ಹಾಗೂ ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಒಟ್ಟು 4.90 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಉಡುಪಿ ಜಿಲ್ಲೆಯಲ್ಲಿ 15 ವರ್ಷದೊಳಗಿನ 1228 ವಿಕಲಚೇತನ ಮಕ್ಕಳು ಇದ್ದು, ಅವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ಪಾರ್ಕ್ ಉಪಯುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಕ್‌ನಲ್ಲಿ ಥೆರಪಿ ಸ್ವಿಂಗ್ಸ್, ಬ್ಯಾಲನ್ಸ್ ಬೀಮ್ಸ್, ಸಂಗೀತ ವಾದ್ಯಗಳು, ಸ್ಪರ್ಶ ಸಂವೇದನಾ ಮಾರ್ಗಗಳು, ಮರಳು ಮತ್ತು ನೀರಿನ ಆಟದ ವಲಯಗಳು ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಜೊತೆಗೆ ಹೂಗಳ ಸುವಾಸನೆ ಮತ್ತು ಪ್ರಕೃತಿ ವೈವಿಧ್ಯ ಅರಿಯಲು ವಿಶೇಷ ಸೆನ್ಸರಿ ಪಾರ್ಕ್ ಕೂಡ ನಿರ್ಮಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಯಾಲ್, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ರುದ್ರಣ್ಣ, ರತ್ನ, ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಜೈ ವಿಠ್ಠಲ್, ಹರಿಪ್ರಸಾದ ರಾಯ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



