ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಅವರಿಗೆ ನಿರ್ಮಿಸಲಾದ ನೂತನ ಮನೆ ‘ಪಂಚಮ್’ ಶನಿವಾರ ಕೆರಾಡಿಯಲ್ಲಿ ಉದ್ಘಾಟನೆಗೊಂಡಿತು. ಶ್ಯಾಮಲಾ ಮತ್ತು ಚಂದ್ರ ನಾಯ್ಕ್ ದಂಪತಿಯ ಪುತ್ರಿಯಾದ ಸಿಂಚನಾ ಅವರಿಗೆ ಉಡುಪಿಯ ಸಾಮಾಜಿಕ ಕಳಕಳಿಯ ಐವರು ಮಿತ್ರರ ಪ್ರಾಯೋಜಕತ್ವದಲ್ಲಿ ಮನೆ ನಿರ್ಮಿಸಲಾಗಿದೆ. ಯಕ್ಷಗಾನ ಕಲಾರಂಗದ ವತಿಯಿಂದ ಹಸ್ತಾಂತರಿಸಲಾದ 95ನೇ ಮನೆ ಇದಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಹಾಗೂ ಉದ್ಯಮಿ ಕೆರಾಡಿ ಚಂದ್ರಶೇಖರ ಶೆಟ್ಟಿ ಜ್ಯೋತಿ ಬೆಳಗಿಸಿ ಮನೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಆಯ್ಕೆ ಪ್ರಕ್ರಿಯೆ ನಡೆಸುತ್ತಿರುವುದು ಸಂಸ್ಥೆಯ ಪಾರದರ್ಶಕತೆಯನ್ನು ತೋರಿಸುತ್ತದೆ ಎಂದರು.

ಸಮಾಜದಲ್ಲಿ ನೊಂದವರಿಗೆ ಸ್ಪಂದಿಸುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಸಿಂಚನಾ ಉತ್ತಮ ಶಿಕ್ಷಣ ಪಡೆದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ನೆರವಾಗುವ ಹಂತಕ್ಕೆ ಏರಬೇಕು ಎಂದು ಹಾರೈಸಿದರು. ಪ್ರಾಯೋಜಕತ್ವ ವಹಿಸಿದ್ದ ಎ.ಜಿ. ಅಸೋಸಿಯೇಟ್ಸ್‌ನ ಆರ್ಕಿಟೆಕ್ಟ್ ಯೋಗೀಶ್ಚಂದ್ರಧರ್, ಇಂಜಿನಿಯರ್ ಎಂ. ಗೋಪಾಲ್ ಭಟ್, ಸ್ಪ್ಯಾನ್ ಅಸೋಸಿಯೇಟ್ಸ್‌ನ ಇಂಜಿನಿಯರ್ ಪಾಂಡುರಂಗ ಆಚಾರ್ಯ ಹಾಗೂ ಪದ್ಮಶ್ರೀ ಕನ್ಸ್ಟ್ರಕ್ಷನ್ಸ್‌ನ ಇಂಜಿನಿಯರ್ ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗಬಾರದು. ಸಾಧನೆಯ ಮೂಲಕ ಉತ್ತಮ ಸ್ಥಾನಮಾನ ಗಳಿಸಬಹುದು ಎಂದು ವಿದ್ಯಾರ್ಥಿನಿಗೆ ಪ್ರೇರಣೆ ನೀಡಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಹಿರಿಯ ಸದಸ್ಯ ಯು. ವಿಶ್ವನಾಥ್ ಶೆಣೈ, ಇಂಜಿನಿಯರ್‌ಗಳಾದ ವಿನಯ ಕುಮಾರ್, ನಿರಂಜನ್, ಮಲ್ಲಿಕಾ ಯೋಗೀಶ್ ಧರ್, ಶ್ರೀಲಕ್ಷ್ಮೀ ಜಿ. ಭಟ್, ಸುರೇಖಾ ಪಿ. ಆಚಾರ್ಯ, ಪದ್ಮಿನಿ ಹರಿಪ್ರಸಾದ್ ಶೆಟ್ಟಿ, ಶಿಲ್ಪಾ ಶಶಿಧರ್, ಗಿರೀಶ್ ಚಂದ್ರಧರ್, ದಿವ್ಯಾ ಗಿರೀಶ್ ಧರ್, ರಕ್ಷಣ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.



