Thursday, November 19, 2026

spot_img

ಯಕ್ಷಗಾನಕ್ಕೆ ಜನಮನ್ನಣೆ ದೊರೆಯಲು ಅದರ ಸ್ವಾತಂತ್ರ್ಯವೇ ಕಾರಣ: ಪ್ರೊ. ಎಂ.ಎಲ್. ಸಾಮಗ

ಉಡುಪಿ: ಕರ್ನಾಟಕದಲ್ಲಿ ಯಕ್ಷಗಾನವು ಶಾಸ್ತ್ರೀಯ ಮತ್ತು ಜನಪದ ಕಲೆಯ ಸ್ವಾತಂತ್ರ್ಯ ಹಾಗೂ ವೈಶಿಷ್ಟ್ಯದಿಂದ ಜನಮನ್ನಣೆ ಗಳಿಸಿದೆ. ಯಕ್ಷಗಾನದ ಬೆಳವಣಿಗೆಯಲ್ಲಿ ಚೌಕಟ್ಟು ಮೀರಿದ ಪ್ರಯೋಗಗಳಿದ್ದರೂ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ಹಾಗೂ ಉಡುಪಿ ಜಿಲ್ಲಾ ಘಟಕದ ವತಿಯಿಂದ ಕುಂಜಿಬೆಟ್ಟು ಶಾರದಾ ರೆಸಿಡೆನ್ಸಿಯಲ್ ಶಾಲೆಯ ಸಭಾಂಗಣದಲ್ಲಿ ಬುಧವಾರ ಸಾಧಕರೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸ್ತ್ರೀಯ ಕಲಾವಿದರಿಗೆ ಪಂಚತಾರಾ ಆತಿಥ್ಯ ನೀಡಿ, ಯಕ್ಷಗಾನ ಹಾಗೂ ಜನಪದ ಕಲಾವಿದರಿಗೆ ಕಲ್ಯಾಣ ಮಂಟಪಗಳಲ್ಲಿ ಆತಿಥ್ಯ ನೀಡುವ ತಾರತಮ್ಯ ಸಲ್ಲದು. ಯಕ್ಷಗಾನ ಯಾವುದೇ ಒಂದು ವರ್ಗಕ್ಕೆ ಸೀಮಿತವಾದ ಕಲೆಯಲ್ಲ; ಅದು ಎಲ್ಲರಿಗೂ ಸೇರಿದ ಕಲೆ. ಕಲಾವಿದರಾಗಲು ಅನುಭವದ ವಿಸ್ತಾರ ಮತ್ತು ವೀಕ್ಷಣೆಯ ಕುತೂಹಲ ಬಹಳ ಮುಖ್ಯ ಎಂದರು. ತಮ್ಮ ದೀರ್ಘಕಾಲದ ಯಕ್ಷಗಾನ ಪಯಣದ ಅನುಭವಗಳನ್ನು ಹಂಚಿಕೊಂಡ ಅವರು, ಅನಾರೋಗ್ಯದ ಸಂದರ್ಭದಲ್ಲಿಯೂ ಯಕ್ಷಗಾನದ ಮೇಲಿನ ಆಸಕ್ತಿಯಿಂದ ರಂಗಕ್ಕೆ ಮರಳಿದ ಕ್ಷಣಗಳನ್ನು ಸ್ಮರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ನಿರ್ಮಲಾ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಶ್ರೀಮಂತಿಕೆ ದೇಶದ ಅಭಿವೃದ್ಧಿಯ ಮಾನದಂಡವಾಗಿದೆ. ಕಲೆ ಮತ್ತು ಸಂಪ್ರದಾಯ ನಮ್ಮ ನಿಜವಾದ ಆಸ್ತಿ. ಅವುಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಸಾಮಗರ ಕೊಡುಗೆ ಮಹತ್ವದ್ದಾಗಿದೆ ಎಂದರು.

ವಿದ್ಯಾವಂತ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ. ಎಂ.ಎಲ್. ಸಾಮಗ ಅವರನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles