ಉಡುಪಿ : ರಾಷ್ಟ್ರೀಯ ಹೆದ್ದಾರಿ–169ರ ಚಿಕ್ಕಮಗಳೂರು–ಉಡುಪಿ ಗಡಿಭಾಗದ ಮಾಳ ಘಾಟ್ನಲ್ಲಿ ಸೋಮವಾರ ಟಿಪ್ಪರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಡೀಸೆಲ್ ಸೋರಿಕೆಯಾಗಿ, ಬಳಿಕ ಸಂಭವಿಸಿದ ಸರಣಿ ಅಪಘಾತದಲ್ಲಿ ಎರಡು ಕಾರುಗಳು ಜಾರಿ ಡಿಕ್ಕಿ ಹೊಡೆದು, ಒಂದೊಂದು ಕಾರು ಪಲ್ಟಿಯಾದ ಘಟನೆ ನಡೆದಿದೆ.

ಮೊದಲ ಅಪಘಾತದಲ್ಲಿ ಟಿಪ್ಪರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಡೀಸೆಲ್ ಸೋರಿಕೆಯಾಗಿದ್ದು, ರಸ್ತೆ ಸಂಪೂರ್ಣ ಜಾರುವಂತಾಯಿತು. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ನಿಯಂತ್ರಣ ಕಳೆದುಕೊಂಡು ಪರಸ್ಪರ ಡಿಕ್ಕಿ ಹೊಡೆದವು. ಅಪಘಾತದ ತೀವ್ರತೆಗೆ ಒಂದು ಕಾರು ಪಲ್ಟಿಯಾಗಿದೆ.

ಅಪಘಾತದಲ್ಲಿ ವಾಹನಗಳಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮಾಹಿತಿ ತಿಳಿದು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ರಸ್ತೆಯ ಮೇಲೆ ಮರಳು ಹಾಕುವ ಮೂಲಕ ಡೀಸೆಲ್ ತೆರವುಗೊಳಿಸಿ, ಸಂಚಾರವನ್ನು ಪುನಃ ಸುಗಮಗೊಳಿಸಿದರು.



