Saturday, September 12, 2026

spot_img

ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ: ಆತ್ಮಹತ್ಯೆ ತಡೆಗೆ ಜಿಲ್ಲಾಡಳಿತ ಕರೆ

ಉಡುಪಿ : ಮಾನಸಿಕ ಒತ್ತಡ, ನಿರಾಸೆ ಹಾಗೂ ಆತ್ಮಹತ್ಯೆಯ ಆಲೋಚನೆಗಳ ಕುರಿತು ಮುಕ್ತವಾಗಿ ಮಾತನಾಡುವ ವಾತಾವರಣ ನಿರ್ಮಿಸುವ ಮೂಲಕ ಸಮಯೋಚಿತ ಮಾನಸಿಕ ನೆರವು ನೀಡಬೇಕು. ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಸೂಕ್ತ ಸಮಯದಲ್ಲಿ ದೊರೆಯುವ ಬೆಂಬಲದಿಂದ ಜೀವ ಉಳಿಸಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಸೈಂಟ್ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವದಾದ್ಯಂತ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ಮಾನಸಿಕ ಸಮಸ್ಯೆಗಳು ಅಥವಾ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲ ಎಂಬ ಅರಿವು ಮೂಡಿಸುವುದು ಹಾಗೂ ಅಗತ್ಯವಿರುವವರಿಗೆ ಸೂಕ್ತ ಸಮಯದಲ್ಲಿ ಮಾನಸಿಕ ನೆರವು ಒದಗಿಸುವುದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಹಾಯ ಮೇರಿ ಮಾತನಾಡಿ, ಮಾನಸಿಕ ಒತ್ತಡ, ನಿರಾಸೆ ಅಥವಾ ಸಂಕಷ್ಟದಲ್ಲಿರುವವರನ್ನು ನಿರ್ಲಕ್ಷಿಸದೆ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಬೇಕು. ಅರ್ಥಮಾಡಿಕೊಂಡು, ಬೆಂಬಲ ನೀಡಿ ಅವರ ಜೀವನವನ್ನು ಉಳಿಸುವಲ್ಲಿ ಪ್ರತಿಯೊಬ್ಬರೂ ಪಾತ್ರವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಶಶಾಂಕ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಆತ್ಮಹತ್ಯೆಯ ಆಲೋಚನೆಗಳು ಏಕಾಏಕಿ ಹುಟ್ಟಿಕೊಳ್ಳುವುದಿಲ್ಲ. ವ್ಯಕ್ತಿಯ ನಡವಳಿಕೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಕಂಡುಬರುವ ಸೂಕ್ಷ್ಮ ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಸ್ಪಂದಿಸುವ ಮೂಲಕ ಅಮೂಲ್ಯ ಜೀವವನ್ನು ಉಳಿಸಬಹುದು ಎಂದರು. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಆರೈಕೆಯೂ ಮುಖ್ಯವಾಗಿದೆ. ಸಂಕಷ್ಟದಲ್ಲಿರುವವರು ಅಥವಾ ಅವರ ಸುತ್ತಮುತ್ತಲಿನವರು ನೆರವಿಗಾಗಿ ಕೇಂದ್ರ ಸರ್ಕಾರದ ಟೆಲಿ-ಮಾನಸ್ 14416 ಉಚಿತ, 24 ಗಂಟೆಗಳ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಚ್. ನಾಯ್ಕರ್, ಶುಶ್ರೂಷಾಧಿಕಾರಿ ದೀಕ್ಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರವೀಣ್, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಸಂತಿ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಜಿಸ್ಟ್ ಜೆನ್ನಿಫರ್ ಕ್ಯಾಥರಿನ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles