ಉಡುಪಿ : ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಉಡುಪಿಗೆ ತೆರಳಿದ್ದ ವೇಳೆ ಮನೆ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ಕುಂಜೆ ಗ್ರಾಮದ ನಿವಾಸಿ ನಿರಂಜನ್ ಭಟ್ (46) ಅವರು ಮೇ 23ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಪತ್ನಿ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದರು. ರಾತ್ರಿ ಸುಮಾರು 9.10ಕ್ಕೆ ಮನೆಗೆ ಹಿಂದಿರುಗಿದಾಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದು ಕಂಡುಬಂದಿದೆ. ಸಂಶಯಗೊಂಡ ಅವರು ಒಳಗೆ ಹೋಗಿ ಪರಿಶೀಲಿಸಿದಾಗ, ಕಳ್ಳರು ಯಾವುದೋ ಆಯುಧ ಬಳಸಿ ಮುಖ್ಯ ಬಾಗಿಲಿನ ಬೀಗ ಒಡೆದು ಮನೆಗೆ ನುಗ್ಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಬೆಡ್ರೂಮ್ ಬಾಗಿಲಿನ ಬೀಗ ಮುರಿದು, ಒಳಗಿದ್ದ ಕಬ್ಬಿಣದ ಅಲ್ಮೇರಾ ಹಾಗೂ ಮರದ ಅಲ್ಮೇರಾಗಳ ಬೀಗಗಳನ್ನು ಒಡೆದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡುಬಂದಿದೆ.

ಕಳ್ಳರು ಅಲ್ಮೇರಾದಲ್ಲಿದ್ದ ಸುಮಾರು 308 ಗ್ರಾಂ ತೂಕದ ಚಿನ್ನಾಭರಣಗಳು, 2 ಕೆಜಿ ಬೆಳ್ಳಿ ವಸ್ತುಗಳು ಹಾಗೂ 1 ಲಕ್ಷ ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳವಾಗಿರುವ ಚಿನ್ನಾಭರಣಗಳ ಅಂದಾಜು ಮೌಲ್ಯ 18.42 ಲಕ್ಷ, ಬೆಳ್ಳಿ ವಸ್ತುಗಳ ಮೌಲ್ಯ 3 ಲಕ್ಷ ಹಾಗೂ ನಗದು ಸೇರಿ ಒಟ್ಟು 22.42 ಲಕ್ಷ ಮೌಲ್ಯದ ಆಸ್ತಿ ಕಳುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



