Sunday, September 20, 2026

spot_img

ಮಂಗಳೂರು ಬಂದರಿಗೆ ಮುಂಜಾನೆ ದಿಢೀರ್ ಭೇಟಿ;  ಮೀನುಗಾರರ ಮನದ ಮಾತಿಗೆ ಕಿವಿಗೊಟ್ಟ ಸಿಎಂ ಡಿ.ಕೆ. ಶಿವಕುಮಾರ್

ಮಂಗಳೂರು : ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಮುಂಜಾನೆ 6 ಗಂಟೆಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು.

ಬೋಟ್‌ನಲ್ಲಿ ಬಂದರು ಪ್ರದೇಶ ಪರಿಶೀಲಿಸಿದ ಸಿಎಂ, ಬಂದರು ಅಭಿವೃದ್ಧಿಗೆ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳು ಮತ್ತು ಮೀನುಗಾರರ ಮುಖಂಡರಿಂದ ಮಾಹಿತಿ ಪಡೆದರು. 25 ವರ್ಷಗಳಿಂದ ಹೂಳೆತ್ತುವ ಕಾಮಗಾರಿ ನಡೆದಿಲ್ಲ. ಹೆಚ್ಚಿನ ಬೋಟ್‌ಗಳ ನಿಲುಗಡೆಗೆ ಹೊಸ ಡಾಕ್‌ಗಳ ನಿರ್ಮಾಣ ಹಾಗೂ ನದಿ ಮತ್ತು ಅಳಿವೆಬಾಗಿಲು ಪ್ರದೇಶದಲ್ಲಿ ಹೂಳೆತ್ತುವ ಅಗತ್ಯವಿದೆ ಎಂದು ಮೀನುಗಾರರ ಮುಖಂಡರು ವಿವರಿಸಿದರು.

ಬಂದರಿನಲ್ಲಿ ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿರುವುದನ್ನು ಗಮನಿಸಿದ ಸಿಎಂ, ಯಾವುದೇ ಕಾರಣಕ್ಕೂ ಮೀನುಗಾರರ ವ್ಯಾಪಾರಕ್ಕೆ ಅಡ್ಡಿಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬಂದರು ಚಟುವಟಿಕೆ ಸ್ಥಗಿತಕ್ಕೆ ಕಾರಣವೇನು ಎಂಬ ಕುರಿತು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಂದ ವರದಿ ಪಡೆಯುವಂತೆ ಸೂಚಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಂದರು ಪ್ರದೇಶದಲ್ಲಿ ರಸ್ತೆ ನಿರ್ಬಂಧ, ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವುದು ಸೇರಿದಂತೆ ಕಾನೂನು ಉಲ್ಲಂಘನೆಗಳು ಗಮನಕ್ಕೆ ಬಂದಿವೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ದಾಖಲೆ ಪರಿಶೀಲಿಸಿ ಅಕ್ರಮ ಜಾಗಗಳನ್ನು ಸರ್ಕಾರದ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದು ಶಿವಕುಮಾರ್ ಹೇಳಿದರು. ಮೀನುಗಾರಿಕೆ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಸಮುದ್ರ ಮೆಟ್ರೋ ಹಾಗೂ ನೀಲಿ ಆರ್ಥಿಕತೆಗೆ ಒತ್ತು ನೀಡಲಾಗುವುದು. ಮೀನುಗಾರರ ಸಮುದಾಯದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಳಿವೆಬಾಗಿಲಿನಲ್ಲಿ ದಶಕಗಳಿಂದ ಹೂಳು ತೆಗೆಯದಿರುವುದು ಅಪಾಯಕಾರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಈ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಹೂಳು ತೆಗೆಯುವ ವಿಧಾನ, ತಾಂತ್ರಿಕ ಸಮಿತಿಯ ಸಲಹೆ ಹಾಗೂ ಅಗತ್ಯ ಯಂತ್ರೋಪಕರಣಗಳ ಕುರಿತು ಮಾಹಿತಿ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕರಾವಳಿ ರಾಜ್ಯದ ಮಾತ್ರವಲ್ಲ, ದೇಶದ ಸಂಪತ್ತು. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಲಿದ್ದು, ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ನೀತಿಗಳ ರೂಪಿಸುವ ಚಿಂತನೆ ಇದೆ ಎಂದು ಹೇಳಿದರು.

ಕಸ್ತೂರಿರಂಗನ್ ವರದಿ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ವಿಶೇಷ ಅಧಿವೇಶನದಲ್ಲಿ ಚರ್ಚೆಗೂ ಮುನ್ನ ಈ ಭಾಗದ ಜನರ ಅಭಿಪ್ರಾಯ ತಿಳಿದುಕೊಳ್ಳಲಾಗುತ್ತಿದೆ. ಜನರ ಬದುಕು ಮುಖ್ಯವಾಗಿದ್ದು, ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ತುಳು ಭಾಷೆ ಕರಾವಳಿ ಜನರ ಹೆಮ್ಮೆಯಾಗಿದ್ದು, ಈ ಭಾಗದ ಜನರ ಬಹುಕಾಲದ ಬೇಡಿಕೆಯಂತೆ ತುಳುವನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿವಕುಮಾರ್ ತಿಳಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಅಶೋಕ್ ಅವರಿಗೆ ಮೀನು ತಿನ್ನುವ ಆಸೆಯಾಗಿದೆ. ಮಂಗಳೂರಿನಿಂದಲೇ ಮೀನು ಕಳುಹಿಸಿ ಅವರ ಆಸೆ ತೀರಿಸೋಣ’ ಎಂದು ಹಾಸ್ಯಮಿಶ್ರಿತವಾಗಿ ತಿರುಗೇಟು ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles