Thursday, November 19, 2026

spot_img

ಭಾರತ್ ಜೋಡೊ ಯುವ ಸಂಘ ಸ್ಥಾಪಿಸಿ ಯುವಜನರನ್ನು ಸಬಲೀಕರಣಗೊಳಿಸಿ: ಜಿಲ್ಲಾಧಿಕಾರಿ

ಉಡುಪಿ : ಜಿಲ್ಲೆಯಲ್ಲಿ ಭಾರತ್ ಜೋಡೊ ಯುವ ಸಂಘಗಳ ಸದಸ್ಯತ್ವ ನೋಂದಣಿ ಹಾಗೂ ಸಮಿತಿಗಳ ರಚನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಯುವಜನರನ್ನು ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚಿಸಿದರು. ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಯುವ ಸಂಘಗಳ ಮಾರ್ಗದರ್ಶಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ಸಂಘಗಳ ನೋಂದಣಿ ಹಾಗೂ ಸಮಿತಿಗಳ ರಚನೆ ನಡೆಯಬೇಕು. ಈಗಾಗಲೇ ನೋಂದಣಿಯಾದ ಸಂಘಗಳ ವಿವರಗಳನ್ನು ಸಂಕೇತ ಸಂಹಿತೆಯಲ್ಲಿ ದಾಖಲಿಸಬೇಕು ಎಂದರು.

ಪ್ರತಿ ಸಂಘವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ 15 ಸದಸ್ಯರ ಕಾರ್ಯಕಾರಿ ಸಮಿತಿ ಹೊಂದಿರಬೇಕು. ಇದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ 12 ಕಾರ್ಯಕಾರಿ ಸದಸ್ಯರು ಇರಲಿದ್ದು, ಮೀಸಲಾತಿ ನಿಯಮದಂತೆ ಸಮಿತಿ ರಚಿಸಬೇಕು. ಸಂಘಗಳ ನೋಂದಣಿ ಜತೆಗೆ ಬ್ಯಾಂಕ್ ಖಾತೆ ತೆರೆಯಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ನಿಯಮಾನುಸಾರ ನೋಂದಣಿಯಾದ ಪ್ರತಿ ಸಂಘಕ್ಕೆ ಸರ್ಕಾರದಿಂದ ವಾರ್ಷಿಕ 10 ಲಕ್ಷ ರೂ. ಅನುದಾನ ದೊರೆಯಲಿದೆ. ಈ ಅನುದಾನವನ್ನು ಸಾಮಾಜಿಕ ಸೇವೆ, ಪರಿಸರ ಮತ್ತು ಜಲ ಸಂರಕ್ಷಣೆ, ಆರೋಗ್ಯ, ಸ್ವಚ್ಛತೆ ಹಾಗೂ ಯುವ ಸಬಲೀಕರಣದ ಚಟುವಟಿಕೆಗಳಿಗೆ ಬಳಸಲಾಗುವುದು. ಸಂಘಗಳ ಸ್ಥಾಪನೆ ಮತ್ತು ಸದಸ್ಯತ್ವ ನೋಂದಣಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರಿಗಳು, ಮಾರ್ಗದರ್ಶಕರು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಸಂಯೋಜಕ ಡಾ. ಗಣನಾಥ್ ಶೆಟ್ಟಿ ಎಕ್ಕಾರು ಮಾತನಾಡಿ, ಭಾರತ್ ಜೋಡೊ ಯುವ ಸಂಘಗಳ ಸ್ಥಾಪನೆಯಲ್ಲಿ ಮಾರ್ಗದರ್ಶಕರ ಪಾತ್ರ ಮಹತ್ವದ್ದಾಗಿದೆ. 16ರಿಂದ 35 ವರ್ಷದೊಳಗಿನ ಯುವಜನರಲ್ಲಿ ನಾಯಕತ್ವ, ಆರೋಗ್ಯಕರ ಜೀವನಶೈಲಿ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಉತ್ತೇಜಿಸುವುದು ಸಂಘಗಳ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೊಳ್ಳಿ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ತಹಶೀಲ್ದಾರರಾದ ಅನಂತ ಶಂಕರ್ ಬಿ., ರಾಕೇಶ್ ಫ್ರಾನ್ಸಿಸ್ ವಿಕ್ಟರ್, ಅಶೋಕ್ ಭಟ್, ತರಬೇತುದಾರರು ಹಾಗೂ ಮಾರ್ಗದರ್ಶಕರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles