ಉಡುಪಿ : ಕರಾವಳಿ ಕರ್ನಾಟಕಕ್ಕೆ ವೇಗದ ಹಾಗೂ ಆಧುನಿಕ ರೈಲು ಸೇವೆ ಒದಗಿಸುವ ಉದ್ದೇಶದಿಂದ, ಬೆಂಗಳೂರು–ಮಂಗಳೂರು–ಉಡುಪಿ–ಕಾರವಾರ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಶೀಘ್ರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಉಡುಪಿ–ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.

ಹಾಸನ–ಸಕಲೇಶಪುರ ಘಾಟಿ ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ, ಈ ಮಾರ್ಗದಲ್ಲಿ ವಂದೇ ಭಾರತ್ ಓಡಿಸಲು ಈಗೇ ಅನುಕೂಲಕರ ಸಮಯ ಎಂದು ಸಂಸದ ಕೋಟ ಅವರು ಸಚಿವರಿಗೆ ವಿವರಿಸಿದರು. ವಂದೇ ಭಾರತ್ ಪರಿಚಯವಾದರೆ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಮತ್ತು ಕಾರವಾರದ ಸಾವಿರಾರು ಪ್ರಯಾಣಿಕರಿಗೆ ವೇಗದ, ಸುಧಾರಿತ ರೈಲು ಸೇವೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ಘಾಟಿ ಭಾಗದ ವಿದ್ಯುದೀಕರಣ ಪೂರ್ಣಗೊಂಡ ನಂತರ, ಬೆಂಗಳೂರಿನಿಂದ ಕಾರವಾರದವರೆಗಿನ ರೈಲು ಸೇವೆಯನ್ನು ಸುಧಾರಿಸಿ ವಂದೇ ಭಾರತ್ ರೈಲನ್ನು ಆರಂಭಿಸುವ ಕುರಿತು ಸಚಿವ ಅಶ್ವಿನಿ ವೈಷ್ಣವ್ ನೀಡಿದ್ದ ಭರವಸೆಯನ್ನು ಕೋಟ ಅವರು ತಮ್ಮ ಮನವಿಯಲ್ಲಿ ಸ್ಮರಿಸಿದರು.



