ಉಡುಪಿ : ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹಲವು ತಿಂಗಳುಗಳಿಂದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಂದಾಪುರ ಉಪ ವಿಭಾಗಾಧಿಕಾರಿಗಳ ಉಪಸ್ಥಿತಿಯಲ್ಲಿ ಬೈಂದೂರು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ, ಸರ್ವೇ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಬಾಕಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ 179 ಬಗರ್ ಹುಕುಂ ಅರ್ಜಿಗಳು ಇನ್ನೂ ತಂತ್ರಾಂಶದಲ್ಲಿ ದಾಖಲೆಯಾಗದೇ ಬಾಕಿ ಉಳಿದಿರುವುದರಿಂದ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಅರ್ಜಿಗಳನ್ನು ತಕ್ಷಣ ತಂತ್ರಾಂಶದಲ್ಲಿ ಅಳವಡಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಜಡ್ಕಲ್ ಹಾಗೂ ಮುದೂರು ಗ್ರಾಮಗಳಲ್ಲಿ ಪ್ಲಾಟಿಂಗ್ ಸಮಸ್ಯೆಯಿಂದ ಭೂ ಪರಿವರ್ತನೆ ಮತ್ತು ವಿಭಾಗ ಪತ್ರಗಳ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಆರಂಭಿಸಿರುವ ಪರಿಹಾರ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸರ್ವೇ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಲ್ಲೂರು ಗ್ರಾಮದ 121 ಮತ್ತು 156 ಸರ್ವೇ ಸಂಖ್ಯೆಗಳಲ್ಲಿನ ಕಂದಾಯ ಹಾಗೂ ಅರಣ್ಯ ಭೂಮಿಯ ಗಡಿ ವಿವಾದ ಪರಿಹಾರಕ್ಕಾಗಿ ಅರಣ್ಯ ಇಲಾಖೆಯ ವರದಿ ಬಂದ ತಕ್ಷಣ ಜಂಟಿ ಸರ್ವೇ ಕೈಗೊಂಡು ಆರೋಗ್ಯ ಇಲಾಖೆಗೆ ಜಾಗ ಮಂಜೂರು ಹಾಗೂ 94ಸಿ ಮತ್ತು ಅಕ್ರಮ-ಸಕ್ರಮ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಕಿರಿಮಂಜೇಶ್ವರ, ಕಂಬದಕೋಣೆ, ಶಿರೂರು, ಗುಜ್ಜಾಡಿ, ದೇವಲಕುಂದ, ವಂಡ್ಸೆ ಹಾಗೂ ಹಟ್ಟಿಯಂಗಡಿ ಗ್ರಾಮಗಳ ಸುಮಾರು 119 ಅರ್ಜಿಗಳು ಸರಕಾರಿ ಪೋರಂಬೋಕು ಜಾಗದ ಸಮಸ್ಯೆಯಿಂದ ಬಾಕಿ ಉಳಿದಿವೆ. ಶೀರ್ಷಿಕೆ ವಿರಹಿತಗೊಳಿಸಿ ಅರ್ಹರಿಗೆ 94ಸಿ ಹಕ್ಕುಪತ್ರ ವಿತರಿಸಲು ಅಗತ್ಯ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೈಂದೂರು ಮತ್ತು ಕುಂದಾಪುರ ತಾಲೂಕು ಕಚೇರಿಗಳಲ್ಲಿ ಆರ್‌ಆರ್‌ಟಿ ತಿದ್ದುಪಡಿಗೆ ಸಂಬಂಧಿಸಿದ 516 ಕಡತಗಳು ಬಾಕಿ ಇರುವುದನ್ನು ಗಮನಿಸಿದ ಶಾಸಕ ಗಂಟಿಹೊಳೆ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಶೀಘ್ರದಲ್ಲೇ ಬಾಕಿ ಅರ್ಜಿಗಳನ್ನು ಶೂನ್ಯಕ್ಕೆ ಇಳಿಸುವಂತೆ ಸೂಚಿಸಿದರು. ಆರೋಗ್ಯ ಕೇಂದ್ರ, ಸ್ಮಶಾನ, ಅಂಗನವಾಡಿ, ಗ್ರಾಮ ಪಂಚಾಯತ್ ಕಟ್ಟಡ, ಬಿಎಸ್‌ಎನ್‌ಎಲ್ ಟವರ್ ಸೇರಿದಂತೆ ವಿವಿಧ ಸಾರ್ವಜನಿಕ ಉದ್ದೇಶಗಳಿಗಾಗಿ ಜಮೀನು ಕಾಯ್ದಿರಿಸುವ ಸುಮಾರು 30 ಪ್ರಸ್ತಾವನೆಗಳನ್ನು ಯಾವುದೇ ವಿಳಂಬವಿಲ್ಲದೆ ಜಿಲ್ಲಾಧಿಕಾರಿ ಹಂತಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡೀಮ್ಡ್ ಫಾರೆಸ್ಟ್ ಪ್ರದೇಶಗಳಲ್ಲಿ ಜಂಟಿ ಸರ್ವೇ ವರದಿ ವಿಳಂಬವಾಗುತ್ತಿರುವುದರಿಂದ ಸಾವಿರಾರು 94ಸಿ ಹಾಗೂ ಅಕ್ರಮ-ಸಕ್ರಮ ಅರ್ಜಿಗಳು ಬಾಕಿ ಉಳಿದಿವೆ. ಗೊಳಿಹೊಳೆ ಮತ್ತು ಹಳ್ಳಿಹೊಳೆ ಭಾಗಗಳಲ್ಲಿ ಸಾರ್ವಜನಿಕರು ಸಲ್ಲಿಸಿರುವ ಬೇಡಿಕೆಗಳಿಗೆ ಇನ್ನೂ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣ ಜಂಟಿ ಸರ್ವೇ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲೆಯಲ್ಲಿ ಚಾಲಕರ ಕೊರತೆ ಮತ್ತು ಸಿಬ್ಬಂದಿಗಳ ರಾಜೀನಾಮೆಯಿಂದ 108 ಆಂಬುಲೆನ್ಸ್ ಸೇವೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮೀಣ ಪ್ರದೇಶಗಳಿರುವ ಬೈಂದೂರು ಕ್ಷೇತ್ರಕ್ಕೆ ಇದರಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ. ಈ ವಿಚಾರವನ್ನು ಎರಡು ಬಾರಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮೀ , ಭೂ ದಾಖಲೆಗಳ ಉಪ ನಿರ್ದೇಶಕರು, ಕುಂದಾಪುರ ಹಾಗೂ ಬೈಂದೂರು ತಹಶೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಅರಣ್ಯ ಇಲಾಖೆ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.



