ಉಡುಪಿ : ಉಡುಪಿಯ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಏಪ್ರಿಲ್ 15ರಿಂದ 20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬನ್ನಂಜೆ ಮಾಧವ ಬನ್ನಂಜೆ ತಿಳಿಸಿದ್ದಾರೆ.

ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 15ರಂದು ಉಡುಪಿಯ ಜೋಡುಕಟ್ಟೆಯಲ್ಲಿ ಅದ್ದೂರಿ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ಸಿಗಲಿದೆ. ಜಿ. ಶಂಕರ್ ಅವರ ಮುಂದಾಳತ್ವದಲ್ಲಿ 100 ಹೊರೆಕಾಣಿಕೆ ಸೇರಿದಂತೆ ಭಕ್ತರ ಸಹಕಾರದಿಂದ ಒಟ್ಟು 250 ಹೊರೆಕಾಣಿಕೆ ದೇವಸ್ಥಾನಕ್ಕೆ ಸಮರ್ಪಿಸಲಾಗುತ್ತದೆ. ಮೆರವಣಿಗೆ ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ದೇವಸ್ಥಾನಕ್ಕೆ ಆಗಮಿಸಲಿದೆ ಎಂದರು.

ಏಪ್ರಿಲ್ 16ರಿಂದ 20ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತಿದಿನವೂ ಸುಮಾರು 5,000 ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ 34,000ಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಸರಸ್ವತಿ ಶಾಲೆ, ಸುಗುಣ ಹೋಟೆಲ್ ಪಕ್ಕ, ಜಯಲಕ್ಷ್ಮಿ ಮಳಿಗೆ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಆವರಣ ಸೇರಿದಂತೆ ಹಲವು ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ದೇವಸ್ಥಾನದ ಆವರಣದಲ್ಲಿ ವ್ಯಾಪಾರಿ ಮಳಿಗೆಗಳನ್ನೂ ನಿರ್ಮಿಸಲಾಗಿದ್ದು, ಅವು ಏಪ್ರಿಲ್ 15ರಂದು ಆರಂಭಗೊಳ್ಳಲಿವೆ. ಪಾರ್ಕಿಂಗ್ ವ್ಯವಸ್ಥೆಯನ್ನು ಶಾಶ್ವತವಾಗಿ ಸುಧಾರಿಸಲು 36 ಸೆಂಟ್ಸ್ ಜಾಗವನ್ನು ಖರೀದಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ₹50 ಲಕ್ಷ ಮುಂಗಡವಾಗಿ ನೀಡಲಾಗಿದೆ. ಉಳಿದ ರೂ 1.05 ಕೋಟಿ ಸಂಗ್ರಹಿಸಲು ಭಕ್ತರ ಸಹಕಾರ ಕೋರಲಾಗಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ವತಿಯಿಂದ ರೂ 1,000ರಿಂದ ರೂ 5,000ವರೆಗೆ ಕೂಪನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜೊತೆಗೆ 100 ರೂಪಾಯಿ ಕಾಣಿಕೆ ಡಬ್ಬಿ ನೀಡುವ ಯೋಜನೆಯೂ ರೂಪಿಸಲಾಗಿದ್ದು, ಭಕ್ತರು ಒಂದು ವರ್ಷದ ಅವಧಿಯಲ್ಲಿ ಡಬ್ಬಿಯನ್ನು ತುಂಬಿಸಿ ದೇವರಿಗೆ ಸಮರ್ಪಿಸಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ, ಪ್ರಧಾನ ತಂತ್ರಿ ಶಶಿಕಾಂತ್ ತಂತ್ರಿ, ಸಮಿತಿ ಸಂಚಾಲಕ ರಮೇಶ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.



