ಉಡುಪಿ: ಫೇಸ್ಬುಕ್ನಲ್ಲಿ ಪ್ರಕಟವಾದ ಹೆಚ್ಚಿನ ಲಾಭದ ಹೂಡಿಕೆ ಜಾಹೀರಾತನ್ನು ನಂಬಿ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು ಸುಮಾರು ರೂ3.89 ಲಕ್ಷ ಕಳೆದುಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಿವಾಸಿ ಶ್ರೀನಿವಾಸ ಅಚಾರ್ ಅವರು ಉಡುಪಿ ಶಾಖೆಯ ಐಸಿಐಸಿಐ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಫೇಸ್ಬುಕ್ನಲ್ಲಿ ಆಗಾಗ್ಗೆ ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿರುವುದಾಗಿ ತೋರಿಸುವ ಜಾಹೀರಾತುಗಳನ್ನು ಗಮನಿಸುತ್ತಿದ್ದರು. ನೀವು ಅದೃಷ್ಟವಂತರಾಗಿದ್ದರೆ, ಇಂದೇ ಗುಂಪಿಗೆ ಸೇರಲು ನಿಮಗೆ ಆಹ್ವಾನ ನೀಡಲಾಗುವುದು. ಇಂದು ಸೇರಲು ಕೊನೆಯ ದಿನ ಎಂಬ ಸಂದೇಶದೊಂದಿಗೆ ಹೂಡಿಕೆ ಗುಂಪಿಗೆ ಆಹ್ವಾನ ಬಂದಿತ್ತು.

ಈ ಆಮಿಷಕ್ಕೆ ಒಳಗಾದ ಶ್ರೀನಿವಾಸ ಅಚಾರ್ ಅವರು ವಂಚಕರ ಸೂಚನೆಯಂತೆ ವಿವಿಧ ಹಂತಗಳಲ್ಲಿ ಹಣ ಹೂಡಿಕೆ ಮಾಡಿದ್ದು, ಒಟ್ಟು ರೂ3,89,387.70 ವಂಚಕರ ಪಾಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಹೆಚ್ಚಿನ ಲಾಭದ ಹೂಡಿಕೆ ಜಾಹೀರಾತುಗಳು, ಅಪರಿಚಿತ ವಾಟ್ಸ್ಆ್ಯಪ್ ಅಥವಾ ಟೆಲಿಗ್ರಾಂ ಗುಂಪುಗಳು ಹಾಗೂ ಖಚಿತ ಆದಾಯದ ಭರವಸೆ ನೀಡುವ ಯೋಜನೆಗಳನ್ನು ನಂಬುವ ಮುನ್ನ ಅಧಿಕೃತವಾಗಿ ಪರಿಶೀಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.


